ಗಾಂಧಿನಗರ: 'ಅಸ್ಥಿರತೆ ಮತ್ತು ಅಶಾಂತಿಯ ಜ್ವಾಲೆಯಲ್ಲಿ ಮುಳುಗಿರುವ ಜಗತ್ತಿಗೆ ಸಾಮ್ರಾಟ ಸಂಪ್ರತಿ ವಸ್ತುಸಂಗ್ರಹಾಲಯವು ಶಾಂತಿ ಹಾಗೂ ಅಹಿಂಸೆಯ ಬಲವಾದ ಸಂದೇಶವನ್ನು ರವಾನಿಸುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿಳಿಸಿದರು.
ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮೋದಿ ಅವರು, 'ವಸ್ತುಸಂಗ್ರಹಾಲಯದ ಪರಂಪರೆ ಮತ್ತು ಸಂದೇಶವು ಭಾರತಕ್ಕೆ ಮಾತ್ರವಲ್ಲದೇ, ಮಾನವೀಯತೆಗೂ ಮಹತ್ವದಾಗಿದೆ.
ಈ ವಸ್ತುಸಂಗ್ರಹಾಲಯವು ಭಾರತದ ವೈವಿಧ್ಯ ಮತ್ತು ಏಕತೆಯ ಮೂಲ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ವೇದಗಳು, ಪುರಾಣಗಳು, ಆಯುರ್ವೇದ, ಯೋಗ ಮತ್ತು ಇತರ ತಾತ್ವಿಕ ವಿಷಯಗಳಂತಹ ಅಂಶಗಳನ್ನು ಒಟ್ಟುಗೂಡಿಸುತ್ತದೆ' ಎಂದರು.
ಮಹಾವೀರ ಜಯಂತಿ ವೇಳೆ ಗಾಂಧಿನಗರದ ಕೋಬಾ ಗ್ರಾಮದಲ್ಲಿರುವ ಶ್ರೀ ಮಹಾವೀರ ಜೈನ ಆರಾಧನಾ ಕೇಂದ್ರದ ಆವರಣದಲ್ಲಿರುವ ಸಾಮ್ರಾಟ ಸಂಪ್ರತಿ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, 'ಮೌಲ್ಯಯುತ ಹಸ್ತಪ್ರತಿಗಳನ್ನು ಸಂರಕ್ಷಿಸುವಲ್ಲಿ ವಿಫಲವಾದ ಹಿಂದಿನ ಸರ್ಕಾರದ ತಪ್ಪುಗಳನ್ನು ನಾವು ಸರಿಪಡಿಸುತ್ತಿದ್ದೇವೆ' ಎಂದು ಹೇಳಿದರು.

