ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಅನ್ನಾಲೆನಾ ಬೇರ್‌ಬಾಕ್ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದು, ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಅಧ್ಯಕ್ಷೆ ಬೇರ್‌ಬಾಕ್ ಅವರು ಮುಂದಿನ ವಾರ ಭಾರತ, ಚೀನಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಕ್ತಾರ ಲಾ ನೀಸ್ ಕಾಲಿನ್ಸ್ ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ಸರ್ಕಾರಗಳ ಆಹ್ವಾನದ ಮೇರೆಗೆ ಬೇರ್‌ಬಾಕ್ ಪ್ರಯಾಣಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಭಾರತದ ಭೇಟಿ ಸಮಯದಲ್ಲಿ ಬೇರ್‌ಬಾಕ್, ಸರ್ಕಾರಿ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಅಲ್ಲದೇ, ವಿಶ್ವಸಂಸ್ಥೆಯ ನಿವಾಸಿ ಸಂಯೋಜಕ ಸ್ಟೀಫನ್ ಪ್ರೈಸ್ನರ್ ನೇತೃತ್ವದ ಭಾರತದಲ್ಲಿನ ವಿಶ್ವಸಂಸ್ಥೆಯ ತಂಡವನ್ನು ಸಹ ಭೇಟಿ ಮಾಡಲಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಬಳಿಕ ಬೇರ್‌ಬಾಕ್ ಅವರ ಮೊದಲ ಭೇಟಿ ಇದಾಗಿದ್ದು, ಜರ್ಮನಿ ವಿದೇಶಾಂಗ ಸಚಿವರಾಗಿದ್ದಾಗ ಹಿಂದೊಮ್ಮೆ ಭೇಟಿ ನೀಡಿದ್ದರು.
ಫೆಬ್ರುವರಿಯಲ್ಲಿ ಎಐ ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯಾ ಗುಟೆರಸ್ ಅವರು ಭಾರತಕ್ಕೆ ಭೇಟಿ ನೀಡಿದ್ದರು.

