ಎಂಟನೇ ತರಗತಿಯ ಪಠ್ಯದಲ್ಲಿ ನ್ಯಾಯಾಂಗ ಕ್ಷೇತ್ರದ ಭ್ರಷ್ಟಾಚಾರ ಕುರಿತ ಅಧ್ಯಾಯವನ್ನು ಸೇರಿಸಿದ್ದಕ್ಕಾಗಿ ಪ್ರೊ.ಮೈಕೆಲ್ ಡ್ಯಾನಿನೊ, ಸುಪರ್ಣಾ ದಿವಾಕರ್ ಮತ್ತು ಅಲೋಕ್ ಪ್ರಸನ್ನ ಕುಮಾರ್ ಅವರನ್ನು ಮುಂದೆ ಯಾವುದೇ ಪಠ್ಯಪುಸ್ತಕ ರಚನಾ ಪ್ರಕ್ರಿಯೆಗೆ ತೊಡಗಿಸಿಕೊಳ್ಳದಂತೆ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಈ ನಿಷೇಧ ಕ್ರಮವನ್ನು ಪರಾಮರ್ಶಿಸುವಂತೆ ಕೋರಿ ಮೂವರು ಶಿಕ್ಷಣ ತಜ್ಞರು ಸೋಮವಾರ ಪರಾಮರ್ಶನಾ ಅರ್ಜಿ ಸಲ್ಲಿಸಿದ್ದಾರೆ.
"ಆರು ಮತ್ತು ಏಳನೇ ತರಗತಿಯ ಪಠ್ಯದಲ್ಲಿ ಶಾಸಕಾಂಗ, ಚುನಾವಣಾ ಆಯೋಗ ಮತ್ತು ಕಾರ್ಯಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉಲ್ಲೇಖವಿದೆ. ಅನುಸರಿಸಲಾಗುತ್ತಿರುವ ವಿಧಿವಿಧಾನಗಳನ್ನು ಬಿಂಬಿಸುವುದು ನಮ್ಮ ಧ್ಯೇಯ. ಇವರು ಸಾಕಷ್ಟು ವಿಶ್ವಾಸಾರ್ಹತೆ ಇರುವ ಶಿಕ್ಷಣ ತಜ್ಞರು" ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಅರವಿಂದ್ ದಾತಾರ್, ಗೋಪಾಲ್ ಶಂಕರನಾರಾಯಣನ್ ಮತ್ತು ಸಾಯಿ ದೀಪಕ್ ಅವರು, ಈ ಮೂವರು ಶಿಕ್ಷಣ ತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಿರುವುದರಿಂದ ಗಂಭೀರ ಪರಿಣಾಮಗಳು ಎದುರಾಗಲಿವೆ ಎಂದು ವಾದಿಸಿದರು. ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಗ್ಚಿಯವರನ್ನೊಳಗೊಂಡ ಪೀಠ ತುರ್ತಾಗಿ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

