ಈ ಯುವಕ 2025ರ ಸೆಪ್ಟೆಂಬರ್ 13ರಂದು ರಷ್ಯಾಗೆ ತರಳಿದ್ದ ಹಾಗೂ ಮುಂದಿನ ತಿಂಗಳೇ ಕುಟುಂಬಕ್ಕೆ ಮಾಹಿತಿ ನೀಡಿ, ಸ್ವದೇಶಕ್ಕೆ ವಾಪಸ್ಸಾಗಲು ನೆರವಾಗುವಂತೆ ಕೋರಿದ್ದ. ಕಳೆದ ಸೆಪ್ಟೆಂಬರ್ ನಲ್ಲೇ ಈ ಸಚಿನ್ ಎಂಬ ಯುವಕ ಮೃತಪಟ್ಟಿರಬೇಕು ಎಂದು ಹೇಳಲಾಗಿದ್ದು, ರವಿವಾರ ಸ್ವಗ್ರಾಮ ಅಖನೂರಿನ ಪಹಾರಿವಾಲಾದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರವಿವಾರ ಮುಂಜಾನೆ ಸಚಿನ್ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗಿತ್ತು.
ರಷ್ಯಾ- ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಜಮ್ಮುವಿನ ಎರಡನೇ ವ್ಯಕ್ತಿ ಇವರಾಗಿದ್ದು, ಕಳೆದ ವರ್ಷದ ಫೆಬ್ರವರಿಯಲ್ಲಿ ಆರ್.ಎಸ್.ಪುರ ಸೆಕ್ಟರ್ ನ ಗೋವಾನಾ ಗ್ರಾಮದ 24 ವರ್ಷ ವಯಸ್ಸಿನ ಮಜೀಂದರ್ ಸಿಂಗ್ ಇಂಥದ್ದೇ ಸನ್ನಿವೇಶದಲ್ಲಿ ಜೀವ ಕಳೆದುಕೊಂಡಿದ್ದರು. 2024ರ ಡಿಸೆಂಬರ್ ನಲ್ಲಿ ಉನ್ನತ ಶಿಕ್ಷಣದ ಜತೆಗೆ ಉದ್ಯೋಗ ಮಾಡುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವ ಸಲುವಾಗಿ ವಿದ್ಯಾರ್ಥಿ ವೀಸಾದಲ್ಲಿ ಸಿಂಗ್ ರಷ್ಯಾಗೆ ತೆರಳಿದ್ದರು.
ಸಚಿನ್ ಹಾಗೂ ಜಮ್ಮು ಜಿಲ್ಲೆಯ ಇತರ ಇಬ್ಬರು ಯುವಕರಾದ ಸುಮೀತ್ ಶರ್ಮಾ ಹಾಗೂ ಅತುಲ್ ಶರ್ಮಾ ನಿರ್ಮಾಣ ಕ್ಷೇತ್ರದ ಉದ್ಯೋಗಕ್ಕೆ ಆಫರ್ ಲೆಟರ್ ಗಳನ್ನು ಪಡೆದ ಬಳಿಕ ರಷ್ಯಾಗೆ ತೆರಳಿದ್ದರು. ಒಂದೇ ಕಂತಿನಲ್ಲಿ 20 ಲಕ್ಷ ಹಾಗೂ ಮಾಸಿಕ 2.5 ಲಕ್ಷ ರೂಪಾಯಿ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡುವುದಾಗಿ ಆಮಿಷವೊಡ್ಡಲಾಗಿತ್ತು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

