ಅಮೆರಿಕ ಮತ್ತು ಇರಾನ್ ನಡುವೆ ಯುದ್ಧವೂ ಇಲ್ಲದ, ಶಾಂತಿಯೂ ನೆಲೆಸದ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಸ್ಥಿತಿ ಉಭಯ ದೇಶಗಳ ಆರ್ಥಿಕ ಮತ್ತು ರಾಜಕೀಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಹೆಚ್ಚಾಗಿ ಯುದ್ಧದಿಂದ ಉಂಟಾಗುವ ಆರ್ಥಿಕ ಸಂಕಷ್ಟವನ್ನು ತಾವು ದೀರ್ಘಕಾಲ ತಡೆದುಕೊಳ್ಳಬಲ್ಲೆವು ಎಂಬ ವಿಶ್ವಾಸದಲ್ಲಿ ಇರಾನ್ ಅಧಿಕಾರಿಗಳಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಮಾತುಕತೆಗಳು ಮುಂದುವರಿಯದಿದ್ದರೆ ಅಮೆರಿಕ ಅಥವಾ ಇಸ್ರೇಲ್ ದಾಳಿಯ ನಿರಂತರ ಭೀತಿಯಲ್ಲಿ ಬದುಕಬೇಕಾಗುತ್ತದೆ ಎಂಬ ಆತಂಕವೂ ಅವರಿಗಿದೆ.
ಇದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಟೆಹರಾನ್ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರಜ್ಞ ಸಾಸನ್ ಕರೀಮಿ, 'ಕಳೆದ ವರ್ಷ ಜೂನ್ನಲ್ಲಿ ಇರಾನ್-ಇಸ್ರೇಲ್ 12 ದಿನಗಳ ಕಾಲ ಹೊಡೆದಾಡಿಕೊಂಡಿದ್ದವು. ಆ ಯುದ್ಧದ ಕೊನೆಯಲ್ಲಿ ಕಂಡು ಬಂದಿದ್ದ ಪರಿಸ್ಥಿತಿಯೇ ಈಗಲೂ ಉದ್ಭವವಾಗಿದೆ. ಅಂದರೆ ಯುದ್ಧ ಕೊನೆಗೊಂಡಿದೆ, ಆದರೆ ಅದಕ್ಕೆ ಯಾವುದೇ ಶಾಶ್ವತ ಪರಿಹಾರವಿಲ್ಲ' ಎಂದು ಹೇಳಿದ್ದಾರೆ.
ಅಪಾಯಕಾರಿ ಪರಿಸ್ಥಿತಿ:
ಪ್ರಸ್ತುತ ಪರಿಸ್ಥಿತಿ ಯುದ್ಧಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಇರಾನ್ನ ಪ್ರಮುಖ ಪತ್ರಿಕೆ 'ಖೊರಾಸನ್'ನಲ್ಲಿ ಪ್ರಕಟವಾದ ಲೇಖನವೊಂದು ಬೊಟ್ಟು ಮಾಡಿದೆ. ಪ್ರಸ್ತುತ ಪರಿಸ್ಥಿತಿಯನ್ನು 'ಅನಿಶ್ಚಿತತೆ' ಎಂದು ಅದು ಕರೆದಿದೆ. 'ಉಭಯ ದೇಶಗಳು ಯುದ್ಧದಿಂದ ಹಿಂದೆ ಸರಿದರೂ, ಬಲಪ್ರಯೋಗ ಮತ್ತು ದಿಗ್ಭಂದನ ಹೇರುವುದರಿಂದ ಹೊರಬಂದಿಲ್ಲ. ಇದು ಯುದ್ಧಕ್ಕಿಂತಲೂ ಹೆಚ್ಚು ಅಪಾಯಕಾರಿ' ಎಂದು ಅದು ಎಚ್ಚರಿಸಿದೆ.
ನಡೆಯದ ನೇರ ಮಾತುಕತೆ:
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಮೂಡಿಸಲು ಪಾಕಿಸ್ತಾನ ಶತಾಯಗತಾಯ ಪ್ರಯತ್ನಿಸುತ್ತಿದೆ. ಮೊದಲ ಸುತ್ತಿನ ಮಾತುಕತೆ ವಿಫಲವಾದ ನಂತರ ಎರಡನೇ ಸುತ್ತಿನ ಮಾತುಕತೆಗೆ ವೇದಿಕೆ ಸಜ್ಜು ಮಾಡಿತ್ತು. ಆದರೆ, ಮಾತುಕತೆಯಿಂದ ಇರಾನ್ ಹಿಂದೆ ಸರಿದಿದ್ದಲ್ಲದೇ, ಅಮೆರಿಕದೊಂದಿಗೆ ನೇರ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿತ್ತು.
ಏತನ್ಮಧ್ಯೆ, ಇರಾನ್ ಅಧಿಕಾರಿಗಳು ಸಂಧಾನಕಾರರ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಟ್ರಂಪ್, ಶನಿವಾರ(ಏ.25) ತಮ್ಮ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜಾರೆಡ್ ಕುಶ್ನರ್ ಅವರನ್ನು ಎರಡನೇ ಸುತ್ತಿನ ಮಾತುಕತೆಗಾಗಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಗೆ ಕಳುಹಿಸುವುದನ್ನು ರದ್ದುಗೊಳಿಸಿದ್ದರು.
ಆದರೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಶನಿವಾರ ಒಮಾನ್ಗೆ ತೆರಳಿ ಸಭೆ ನಡೆಸಿದ್ದರು. ಇದಕ್ಕೂ ಮೊದಲು ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅದಾದ ಬಳಿಕ ಭಾನುವಾರ ಮತ್ತೊಮ್ಮೆ ಪಾಕಿಸ್ತಾನಕ್ಕೆ ಮರಳಿದ್ದರು. ಸೋಮವಾರ ಪಾಕಿಸ್ತಾನದಿಂದ ರಷ್ಯಾಕ್ಕೆ ತೆರಳಿದ್ದಾರೆ. ಅಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಅರಾಘ್ಚಿ ಭೇಟಿ ಮಾಡಲಿದ್ದಾರೆ.
ಇರಾನ್ಗೆ ಉತ್ತಮ ಅವಕಾಶ:
ಒಪ್ಪಂದದ ವಿಷಯದಲ್ಲಿ ಇರಾನ್ಗೆ ಇದು ಉತ್ತಮ ಸಮಯವಾಗಿದೆ ಎಂದು ಕರೀಮಿ ತಿಳಿಸಿದ್ದಾರೆ. ಶಾಂತಿ ಒಪ್ಪಂದದ ಜೊತೆಗೆ ತನ್ನೆಲ್ಲಾ ಬೇಡಿಕೆಗಳನ್ನು ಸೇರಿಸಿ ಸಂಪೂರ್ಣ ಚೌಕಟ್ಟನ್ನು ರೂಪಿಸಲು ಈ ಸಮಯವನ್ನು ಇರಾನ್ ಬಳಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆದರೆ, ಇರಾನ್ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದೇ ರಾಜಕೀಯವಾಗಿ ಹೆಚ್ಚು ಒಳ್ಳೆಯದು. ಏಕೆಂದರೆ ಯಾವುದೇ ಬದಲಾವಣೆ ಮಾಡಿದರೂ, ಒಂದು ವೇಳೆ ಯೋಜನೆ ವಿಫಲವಾದರೆ ಭವಿಷ್ಯದಲ್ಲಿ ಅದರ ದೋಷಾರೋಪಣೆಯನ್ನು ಹೊರಬೇಕಾಗಬಹುದು ಎಂಬ ಭಯವಿದೆ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಸೋಲಿಸಲು ಇರಾನ್ ಪಟ್ಟು:
ಲಂಡನ್ ಮೂಲದ ಸಂಶೋಧನಾ ಸಂಸ್ಥೆ 'ಬೋರ್ಸ್ ಆಂಡ್ ಬಜಾರ್ ಫೌಂಡೇಶನ್'ನ ಸಿಇಒ ಎಸ್ಫಾಂಡ್ಯಾರ್ ಬತ್ಮಾಂಘೆಲಿಡ್ಜ್ ಮಾತನಾಡಿ, 'ಆರ್ಥಿಕತೆಯ ವಿಷಯದಲ್ಲಿ ತಾವು ಟ್ರಂಪ್ ಅವರನ್ನು ಹಿಮ್ಮೆಟ್ಟಿಸಬಹುದು ಎಂದು ಇರಾನ್ ಇನ್ನೂ ನಂಬಿದೆ. ಕನಿಷ್ಠ ಕೆಲವು ವಾರಗಳವರೆಗೆ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗುವ ಅಡೆತಡೆಗಳು ಇರಾನಿಯನ್ನರಿಗಿಂತ ಟ್ರಂಪ್ಗೆ ಹೆಚ್ಚು ದುಬಾರಿಯಾಗಲಿವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇರಾನ್ ಆರ್ಥಿಕತೆಯು ಈಗಾಗಲೇ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಯುದ್ಧದ ಪರಿಣಾಮವಾಗಿ ಪೆಟ್ರೋಕೆಮಿಕಲ್ಸ್ ಮತ್ತು ಔಷಧಿಗಳ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದು, ದೇಶದಾದ್ಯಂತ ಉದ್ಯೋಗ ಕಡಿತದ ವರದಿಗಳು ಹರಡುತ್ತಿವೆ.
ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಇರಾನ್ ಆಡಳಿತ ಸಿದ್ಧವಾಗಿದೆ. ಆರ್ಥಿಕವಾಗಿ ಈ ಬಿಕ್ಕಟ್ಟನ್ನು ನಿಭಾಯಿಸಿದರೂ, ಅದರ ಕಾರ್ಯತಂತ್ರದ ಸಂದಿಗ್ಧತೆ ಮಾತ್ರ ಹಾಗೆಯೇ ಉಳಿಯಲಿದೆ. 'ಒಪ್ಪಂದವೂ ಇಲ್ಲದ, ಯುದ್ಧವೂ ಇಲ್ಲದ' ಈ ಪರಿಸ್ಥಿತಿ ಇರಾನ್ಗೆ ಪಾಲಿಗೆ ಹೆಚ್ಚು ಅಪಾಯಕಾರಿ ಎಂದು ಬತ್ಮಾಂಘೆಲಿಡ್ಜ್ ತಿಳಿಸಿದ್ದಾರೆ.
ಹಣದುಬ್ಬರ ಸವಾಲು:
ಒಪ್ಪಂದವೊಂದು ಏರ್ಪಟ್ಟರೆ ಇರಾನ್ನ ವಾರ್ಷಿಕ ಹಣದುಬ್ಬರವು ಶೇ. 49ಕ್ಕೆ ಏರಬಹುದು ಎಂದು ಇರಾನ್ನ ಪ್ರಮುಖ ಆರ್ಥಿಕ ಪತ್ರಿಕೆ 'ದೋನ್ಯಾ-ಎ-ಎಘ್ತೇಸಾದ್' ಮುನ್ಸೂಚನೆ ನೀಡಿದೆ.
'ಯುದ್ಧವೂ ಇಲ್ಲದ, ಶಾಂತಿಯೂ ಮೂಡದ' ಸ್ಥಿತಿಯು ಮುಂದಿನ ದಿನಗಳಲ್ಲಿ ಹಣದುಬ್ಬರವನ್ನು ಶೇ. 70ಕ್ಕೆ ತಳ್ಳಬಹುದು. ಯುದ್ಧಕ್ಕೆ ಮರಳಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಅದು ಎಚ್ಚರಿಸಿದೆ.
3 ಹಂತದ ಪ್ರಸ್ತಾವನೆ ಮುಂದಿಟ್ಟ ಇರಾನ್
ಯುದ್ಧ ಕೊನೆಗೊಳಿಸಲು ಮುಂದಾಗಿರುವ ಇರಾನ್, ಮಧ್ಯವರ್ತಿ ಪಾಕಿಸ್ತಾನದ ಮೂಲಕ ಮೂರು ಹಂತದ ಪ್ರಸ್ತಾವನೆ ಮುಂದಿಟ್ಟಿದೆ. ಇದು ಯುದ್ಧವನ್ನು ಕೊನೆಗೊಳಿಸುವುದು, ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವುದು ಹಾಗೂ ಪರಮಾಣು ಕಾರ್ಯಕ್ರಮಗಳನ್ನು ಒಳಗೊಂಡಿದೆ.
ದಿಗ್ಬಂಧನ ತೆರವು ಮತ್ತು ಕದನ ವಿರಾಮ: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮಾತುಕತೆಗೂ ಮುನ್ನ ಅಮೆರಿಕವು ಇರಾನ್ ಬಂದರುಗಳ ಮೇಲಿನ ದಿಗ್ಬಂಧನವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಅದರ ಬಳಿಕವಷ್ಟೇ ಚರ್ಚೆ ಸಾಧ್ಯ ಎನ್ನಲಾಗಿದೆ.
ಹೊರ್ಮುಜ್ ಜಲಸಂಧಿ: ಜಗತ್ತಿನ ಪ್ರಮುಖ ತೈಲ ಸಂಚಾರ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದು ಎರಡನೇ ಹಂತದ ಗುರಿಯಾಗಿದೆ. ಮೊದಲ ಹಂತದ ಬೇಡಿಕೆಗಳಿಗೆ ಒಪ್ಪಿಕೊಂಡರೆ ಮಾತ್ರ ಎರಡನೇ ಹಂತದ ಚರ್ಚೆ ಸಾಧ್ಯವಾಗಲಿದೆ.
ಪರಮಾಣು ಕಾರ್ಯಕ್ರಮ: ಎರಡು ಹಂತಗಳ ಬಳಿಕವಷ್ಟೇ ಅಂತಿಮವಾಗಿ ಪರಮಾಣು ಕಾರ್ಯಕ್ರಮದ ಕುರಿತು ಇರಾನ್ ಚರ್ಚೆ ನಡೆಸಲಿದೆ.

