ಕುಂಬಳೆ: ವಿಶಿಷ್ಟ ಕಲಾ ಪ್ರಕಾರವಾದ ಯಕ್ಷಗಾನವನ್ನು ಸಂರಕ್ಷಿಸಲು ಕುಂಬಳೆ ಮುಜುಂಗಾವಲ್ಲಿ ನಿರ್ಮಿಸಿದ್ದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ (ಅಕಾಡೆಮಿ) ಈಗ ವಿನಾಶದ ಅಂಚಿನಲ್ಲಿದೆ. ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸಾಂಸ್ಕೃತಿಕ ಕೇಂದ್ರವನ್ನು ಪುನರುಜ್ಜೀವನಗೊಳಿಸಬೇಕೆಂದು ಸ್ಥಳೀಯ ಕಲಾವಿದರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ.
2013 ರಲ್ಲಿ ಸ್ಥಾಪನೆಯಾದ ಅಕಾಡೆಮಿಯನ್ನು ಆ ಸಮಯದಲ್ಲಿ ಅದರ ನಿರ್ಮಾಣವನ್ನು ಪೂರ್ಣಗೊಳಿಸದೆ ತೆರೆಯಲಾಯಿತು. ಯಾವುದೇ ಅಗತ್ಯ ಯೋಜನೆಗಳನ್ನು ಜಾರಿಗೆ ತರದ ಕಾರಣ, ಈ ಸಾಂಸ್ಕೃತಿಕ ಕೇಂದ್ರವನ್ನು ಅರ್ಧಕ್ಕೆ ಕೈಬಿಡಲಾಗಿದೆ. ಈಗ ಕಟ್ಟಡವು ಅರಣ್ಯದಿಂದ ಆವೃತವಾಗಿದೆ. ಈ ಕೇಂದ್ರವು ರಾತ್ರಿಯಲ್ಲಿ ಸಮಾಜ ವಿರೋಧಿ ಶಕ್ತಿಗಳ ಆಶ್ರಯ ತಾಣವಾಗಿದೆ ಎಂಬುದು ದೊಡ್ಡ ಕಳವಳಕಾರಿಯಾಗಿದೆ.
ತೆಂಕಣ ಯಕ್ಷ ಗಾನ ಬೆಳೆದ ಕುಂಬಳೆ ಸೀಮೆಯಲ್ಲಿ ಹಲವು ಭಾಗವತರು, ಅರ್ಥಧಾರಿಗಳು, ವೇಷಧಾರಿ ಕಲಾವಿದರು ಹುಟ್ಟಿ ಬೆಳೆದು ಕಲಾ ಕ್ಷೇತ್ರದ ಉಳಿವಿಗೂ ಕಾರಣರಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಶತಮಾನಗಳ ಹಿಂದೆ ಹುಟ್ಟಿ ಬೆಳೆದು ಯಕ್ಷ ಗಾನ ಪಿತಾಮಹ ಎನಿಸಿಕೊಂಡ ಪಾರ್ತಿಸುಬ್ಬನ ಸ್ಮರಣಾರ್ಥ ಸ್ಥಾಪನೆಗೊಂಡ ಯಕ್ಷ ಕಲಾ ಮಂದಿರ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿರುವುದು ಯಕ್ಷ ಜನಕನ ಹೆಸರಿಗೆ ಕಳಂಕ ತರುತ್ತಿದೆ. ಸುಮಾರು 16 ವರ್ಷಗಳ ಹಿಂದೆ ಆರಂಭಗೊಂಡ ಕಲಾ ಕೇಂದ್ರ ನಿರ್ಮಾಣ ಪೂರ್ಣಗೊಳ್ಳದೆ ಕಟ್ಟಡವು ಕುಡುಕರ, ಪುಂಡರ ಆಶ್ರಯತಾಣವಾಗಿದೆ. ಪೊದೆ ಗಿಡಗಳಿಂದ ಆವೃತವಾದ ಕಟ್ಟಡದಲ್ಲಿ ಮದ್ಯದ ಬಾಟಲಿಗಳು, ಗಾಜಿನ ಚೂರು, ಒಡೆದ ಹೆಂಚು, ಕೆಡವಲ್ಪಟ್ಟ ಕಿಟಕಿ ಕಲ್ಲುಗಳು ಕಂಡು ಬರುತ್ತಿವೆ. ಮಳೆಗಾಲದ ವೇಳೆ ಮಳೆ ನೀರು ಶೇಖರವಾಗಿ ನೆಲ ಪಾಚಿಕಟ್ಟದ ಸ್ಥಿತಿಯಲ್ಲಿದೆ ಯಕ್ಷ ಮಂದಿರ.
ಮಾಡಿಗೆ ಹೊದೆಸಲಾದ ಕಬ್ಬಿಣದ ಸರಳುಗಳ ಇಂದೋ ನಾಳೆಯೋ ಧರಾಶಾಯಿಯಾಗುವ ಸ್ಥಿತಿಯಲ್ಲಿವೆ. 2009-10ರಲ್ಲಿ ಅಂದಿನ ಎಡರಂಗ ಸರ್ಕಾರದ ಅಧಿಕಾರದ ವೇಳೆ ಸುಮಾರು 20 ಲಕ್ಷ ರೂ. ಅನುದಾನದ ಮೂಲಕ ಪಾರ್ತಿಸುಬ್ಬನ ಸ್ಮರಣಾರ್ಥಯಕ್ಷ ಗಾನ ಕಲಾಕೇಂದ್ರ ಸ್ಥಾಪನೆ, ಆ ಮೂಲಕ ಯುವ ಕಲಾವಿದರನ್ನು ಆಕರ್ಷಿಸಿ, ಕಲೆಯನ್ನು ಪ್ರವರ್ಧಿಸುವ ಯೋಜನೆ ರೂಪಿಸಲಾಗಿತ್ತು.
ಕಲಾಕೇಂದ್ರದ ಕಾಮಗಾರಿ ಭರದಿಂದ ಸಾಗಿತ್ತು. ಅಂದಿನ ಶಾಸಕರ ನಿಧಿಯಿಂದ (ಮಂಜೇಶ್ವರ ಮತ್ತು ಆಂಗ್ಲೋಇಂಡಿಯನ್) ಸುಮಾರು 15 ಲಕ್ಷ ರೂ.ಗಳ ಧನಸಹಾಯವು ದೊರೆತಿತ್ತು. ಕಲಾಕೇಂದ್ರದ ಶೇ.90 ಕಾಮಗಾರಿಯು ಬಹಳ ಹಿಂದೆಯೇ ಪೂರ್ಣಗೊಂಡಿತ್ತು. ನೆಲಕ್ಕೆ ಟೈಲ್ಸ್ ಹೊದಿಕೆ, ಕಲಾವಿದರಿಗೆ ವೇಷ ಬದಲಿಸುವ ಕೊಠಡಿಗಳು ಪೂರ್ಣಗೊಂಡಿದ್ದರೂ, ಕಲಾ ಕೇಂದ್ರ ಉದ್ಘಾಟನೆಯಾಗದೆ, ನಿರ್ಲಕ್ಷ ಕ್ಕೆಗೊಳಗಾದ ಕಾರಣ ಯೋಜನೆ ಸಾಕಾರಗೊಳ್ಳದೆ ಸ್ತಬ್ದವಾಗಿರುವುದು ಈ ಭಾಗದ ಯಕ್ಷ ಕಲಾರಸಿಕರನ್ನು ಭ್ರಮ ನಿರಸಗೊಳಿಸಿದೆ.
ಸ್ಮಾರಕ ಯೋಜನೆಗೆ ರಚನೆಯಾಗಿದ್ದ ಸಮಿತಿ 5 ಸೆಂಟ್ಸ್ ಜಾಗ್ಥವನ್ನು ಖರೀದಿಸಿ, ಅಚ್ಚುಕಟ್ಟಾಗಿ ಮುಂದುವರಿದಿದ್ದ ಯೋಜನೆ ಇಂದು ನೆನೆಗುದಿಗೆ ಬಿದ್ದಿದೆ. ಸಮಿತಿಯ ಕಾಲಾವಧಿ ಮುಗಿದರೂ ಹೊಸ ಸಮಿತಿ ಸದಸ್ಯರ ಆಯ್ಕೆಯಾಗಲಿ ನಡೆದಿಲ್ಲ. ಆದಷ್ಟು ಬೇಗ ನೂತನ ಸಮಿತಿ ರೂಪುಗೊಂಡು ಕಾಮಗಾರಿ ಪೂರ್ಣಗೊಳಿಸಿ, ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಕೆಲಸ ನಡೆಯಬೇಕಿದೆ.
ಮಾಜಿ ಶಾಸಕ ಸಿ.ಎಚ್. ಕುಞಂಬು ಅವರು ಹೇಳುವಂತೆ 2009ರಲ್ಲಿ ಅಂದಿನ ಸರ್ಕಾರವು ಹಲವು ಕಲೆ, ನಾಟ್ಯ, ಸಂಗೀತ, ಜನಪದ ಹಾಡು, ನೃತ್ಯ ಪ್ರಕಾರಗಳ ಪ್ರೋತ್ಸಾಹ ಹಾಗೂ ಉತ್ತೇಜನಕ್ಕಾಗಿ ಕಲಾ ಕೇಂದ್ರಗಳ ಸ್ಥಾಪನೆಗೆ ಯೋಜನೆ ರೂಪಿಸಿತ್ತು, ಆ ಬಳಿಕ ಬಂದ ಎಲ್ಲಾ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೊಳಗಾದ ಈ ಯೋಜನೆ ಇನ್ನಾದರೂ ಯಕ್ಷಗಾನ ಮಂದಿರವನ್ನು ಸಾರ್ಥಕತೆಯತ್ತ ಕೊಂಡೊಯ್ಯಬೇಕು ಎನ್ನುತ್ತಾರೆ.
ಎರಡು ಅಂತಸ್ತಿನ ಕಟ್ಟಡವು ಸುಮಾರು 200 ಮಂದಿಗೆ ಕುಳಿತುಕೊಳ್ಳುವ ಸಭಾಂಗಣ, ವೇದಿಕೆ, ಮೆಕಪ್ ರೂಂ, ಗ್ರಂಥಾಲಾಯ, ಅಧ್ಯಯನ ಕೇಂದ್ರ, ಯಕ್ಷಗಾನ ತರಬೇತಿ ಕೇಂದ್ರ, ಅತಿಥಿಗೃಹ ಮುಂತಾದ ಸೌಕರ್ಯಗಳನ್ನು ಯೋಜನೆಯಲ್ಲಿ ಗುರುತಿಸಲಾಗಿತ್ತು.
ಪುನಃಸ್ಥಾಪನೆಗಾಗಿ ಕೂಗು:
ಕಳೆದ ದಶಕದಿಂದ ಕಲಾವಿದರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಯಕ್ಷಗಾನ ಅಕಾಡೆಮಿಯ ಪುನಃಸ್ಥಾಪನೆಗಾಗಿ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಅದಾಲತ್‍ಗಳಲ್ಲಿ ಮುಖ್ಯಮಂತ್ರಿ ಮತ್ತು ಇತರರಿಗೆ ಹಲವಾರು ಬಾರಿ ಅರ್ಜಿಯನ್ನು ಸಲ್ಲಿಸಲಾಯಿತು. ಇದರ ಆಧಾರದ ಮೇಲೆ, ಹಿಂದಿನ ಸರ್ಕಾರದ ಕೊನೆಯ ದಿನಗಳಲ್ಲಿ ಕಲಾ ದೇವಾಲಯದ ಪುನಃಸ್ಥಾಪನೆಯ ಭಾಗವಾಗಿ ಸರ್ಕಾರವು 2 ಲಕ್ಷ ರೂ.ಗಳನ್ನು ನಿಗದಿಪಡಿಸಿತ್ತು, ಆದರೆ ಆ ಮೊತ್ತವನ್ನು ಬಳಸಿಕೊಂಡು ಯಾವುದೇ ಮುಂದಿನ ಕ್ರಮ ಕೈಗೊಳ್ಳಲಿಲ್ಲ. ಇದೀಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಕಲಾ ದೇವಾಲಯದ ಸ್ಥಿತಿ ಬದಲಾಗುತ್ತದೆ ಎಂದು ಕಲಾವಿದರು ಆಶಿಸಿದ್ದಾರೆ. ಈಗಿನ ಸಂಸ್ಕೃತಿ ಸಚಿವ ಪಿ.ಸಿ. ವಿಷ್ಣನಾಥ್ ಕುಂಬಳೆಯೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕಲಾ ದೇವಾಲಯದ ಪುನಃಸ್ಥಾಪನೆಗಾಗಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಈ ಸಾಂಸ್ಕೃತಿಕ ಕೇಂದ್ರವನ್ನು ಉಳಿಸಬಹುದು ಎಂದು ಆಶಿಸಲಾಗಿದೆ. ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಈ ಐತಿಹಾಸಿಕ ಸ್ಮಾರಕವನ್ನು ಸಾಕಾರಗೊಳಿಸುವ ಬಯಕೆಯಲ್ಲಿ ಸ್ಥಳೀಯರು ಒಗ್ಗಟ್ಟಿನಿಂದ ಒತ್ತಾಯಿಸುತ್ತಿದ್ದಾರೆ.
ಹೈಲೈಟ್ಸ್:
- ಅಕಾಡೆಮಿಯನ್ನು 2013 ರಲ್ಲಿ ತೆರೆಯಲಾಯಿತು, ಆದರೆ ಕಟ್ಟಡ ಪೂರ್ಣಗೊಂಡಿರಲಿಲ್ಲ.
- ಕಟ್ಟಡವು ಈಗ ಸಂಪೂರ್ಣವಾಗಿ ಕಾಡಿನಿಂದ ಆವೃತವಾಗಿದೆ.
- ರಾತ್ರಿಯಲ್ಲಿ, ಈ ಸ್ಥಳವು ಸಮಾಜ ವಿರೋಧಿ ಶಕ್ತಿಗಳ ಆಶ್ರಯ ತಾಣವಾಗಿದೆ.
- ಹಿಂದಿನ ಸರ್ಕಾರವು ನಿಗದಿಪಡಿಸಿದ ಎರಡು ಲಕ್ಷ ರೂಪಾಯಿಗಳನ್ನು ಬಳಸಲಾಗಿಲ್ಲ.
- ಮಂಜೇಶ್ವರ ಶಾಸಕರು ಹೊಸ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿದೆ.
- ಕಲಾವಿದರು ಸಂಸ್ಕøತಿ ಇಲಾಖೆಯ ತಕ್ಷಣದ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.
- ಯಕ್ಷ ಪಿತಾಮಹನ ನೆಲದಲ್ಲೇ ಸಲ್ಲದ ಗೌರವ.
ಅಭಿಮತ:
-ಕಲಾಕ್ಷೇತ್ರ ಪೂರ್ಣಗೊಳಿಸದಿರುವುದು ಅವಮಾನಕರ. ಈ ಹಿಂದಿನ ವಿವಿಧ ಸರ್ಕಾರಗಳ ಕಾಲಾವಧಿಯಲ್ಲಿ ವ್ಯರ್ಥವಾಗಿ ಸಮಿತಿ ರಚಿಸಿ ಕಾಲಕ್ಷೇಪ ಮಾಡಿದ್ದಷ್ಟೇ ಹೊರತು ಸರ್ಕಾರಕ್ಕಾಗಲಿ, ಸಮಿತಿಗಳಿಗಾಗಲಿ ಸ್ಪಷ್ಟ ಚಿತ್ರಣವಿರಲಿಲ್ಲ. ಸರ್ಕಾರ ಕಟ್ಟಡ ನಿರ್ಮಾಣಕ್ಕಷ್ಟೇ ಅನುದಾನ ನೀಡುವುದಾದರೆ ಅಗತ್ಯವಿಲ್ಲ. ಕಲಾವಿದರೇ ಖರ್ಚು ಭರಿಸಿ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಆದರೆ ಅಗತ್ಯವಿಲ್ಲ. ಈ ಕಟ್ಟಡವನ್ನು ಒಂದಷ್ಟು ಸರಿಪಡಿಸಿ ಕುಟುಂಬಶ್ರೀ ಚಟುವಟಿಕೆಗಳಿಗೋ, ಸರ್ಕಾರಿ ಅತಿಥಿ ಗೃಹವಾಗಿಯೊ ಬಳಸಬಹುದು. ಪಾರ್ತಿಸುಬ್ಬನ ಹೆಸರಲ್ಲಿ ಕುಂಬಳೆಯಲ್ಲಿ ಇಂತಹದೊಂದು ಯೋಜನೆ ಸಾಕಾರಗೊಳ್ಳದು.
-ದಿವಾಣ ಶಿವಶಂಕರ ಭಟ್.
ಯಕ್ಷಗಾನ ಕಲಾವಿದರು, ಕಲಾಕ್ಷೇತ್ರದ ಮಾಜಿ ಸದಸ್ಯ.
ಕಲಾಕ್ಷೇತ್ರದ ಕಟ್ಟಡ ನಿರ್ಮಾಣ ಸಂಬಂಧ ನಿರ್ಮಾಣ ಗುತ್ತಿಗೆ ಪಡೆದ ವ್ಯಕ್ತಿಗೆ ಈವರೆಗೂ ಹಣ ಸಂದಾಯವಾಗಿಲ್ಲ ಎಂದು ತಿಳಿದುಬಂದಿದೆ. ಇದೀಗ ಅವರು ಮೃತಪಟ್ಟಿದ್ದು, ಅವರ ಪುತ್ರರು ವೆಚ್ಚಮಾಡಿದ ಹಣ ಪಾವತಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ವ್ಯಾಜ್ಯವನ್ನು ಸರ್ಕಾರ ಮುಗಿಸದ ಹೊರತು ಪಾರ್ತಿಸುಬ್ಬ ಕಲಾಕ್ಷೇತ್ರಕ್ಕೆ ಮೋಕ್ಷ ಪ್ರಾಪ್ತಿಯಾಗದು.

.jpeg)
.jpeg)
.jpeg)
