ಬೊಕಾಜನ್ (PTI): 'ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೇಶಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬೊಕಾಜನ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ರತೋನ್ ಎಂಗ್ಟಿ ಪರ ಗುರುವಾರ ಪ್ರಚಾರ ನಡೆಸಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ 'ಲ್ಯಾಂಡ್ ಎಟಿಎಂ' ನಡೆಸುತ್ತಿದ್ದು, ಸಾರ್ವಜನಿಕರಿಂದ ಭೂಮಿ ಕಸಿದುಕೊಂಡು, ದೊಡ್ಡ ಕಾರ್ಪೋರೇಟ್ ಉದ್ಯಮಿಗಳಿಗೆ ಹಂಚುತ್ತಿದ್ದಾರೆ' ಎಂದು ದೂರಿದ್ದಾರೆ.
'ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಕುಟುಂಬ ದೇಶ ಕಂಡ ಅತಿ ಭ್ರಷ್ಟರಾಗಿದ್ದು, ಅವರು ಕೂಡ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯದಲ್ಲಿ ಪಕ್ಷವು ಅಧಿಕಾರ ಹಿಡಿದ 100 ದಿನಗಳ ಒಳಗಾಗಿ ಅಸ್ಸಾಂನ ಖ್ಯಾತ ಗಾಯಕ ಜುಬಿನ್ ಗರ್ಗ್ ಸಾವಿಗೆ ಪಕ್ಷವು ಸೂಕ್ತ ನ್ಯಾಯ ಒದಗಿಸಲಿದೆ' ಎಂದು ಭರವಸೆ ನೀಡಿದ್ದಾರೆ.
'ಶರ್ಮಾ ಅವರು ಸಿಂಡಿಕೇಟ್ಗಳ ಮೂಲಕ ಅಸ್ಸಾಂ ನಡೆಸುತ್ತಿದ್ದು, ಭ್ರಷ್ಟಾಚಾರ ಆರೋಪವನ್ನು ಬಳಸಿಕೊಂಡು ಮೋದಿ ಅವರೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ. ದೇಶದ ಮೂರು ಕಾರ್ಪೋರೇಟ್ ಉದ್ಯಮ ಸಂಸ್ಥೆಗಳಿಗೆ ರಾಜ್ಯದಲ್ಲಿ 98,400 ಸಾವಿರ ಬಿಗಾ (61 ಸಾವಿರ ಎಕರೆ) ಜಮೀನು ಹಂಚಿಕೆ ಮಾಡಲಾಗಿದೆ. ಮೋದಿ ಹಾಗೂ ಅಮಿತ್ ಶಾ ಅವರು ಅಸ್ಸಾಂ ಅನ್ನು ಭೂಮಿಯ ಎಟಿಎಂ ಆಗಿ ಪರಿವರ್ತಿಸಿಕೊಂಡಿದ್ದು, ಜನರಿಂದ ಕಿತ್ತುಕೊಂಡ ಜಮೀನುಗಳನ್ನು ಉದ್ಯಮಿಗಳಿಗೆ ಹಸ್ತಾಂತರಿಸಿದ್ದಾರೆ' ಎಂದು ದೂರಿದ್ದಾರೆ.
'ಕಾಂಗ್ರೆಸ್ ಪಕ್ಷವು ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಹೊಂದಿದೆ. ಸ್ಥಳೀಯ ಜನರಿಗೆ ಅಧಿಕಾರ ನೀಡಬೇಕು ಎಂದು ನಂಬಿದೆ. ಬಿಜೆಪಿಯು ಅಸ್ಸಾಂ ಆಡಳಿತವನ್ನು ದೆಹಲಿಯಿಂದ ನಡೆಸಬೇಕು ಎಂದು ಬಯಸುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯೆ ಇರುವ ವ್ಯತ್ಯಾಸ. ಅಸ್ಸಾಂನಲ್ಲಿ ವಿವಿಧ ಸಿದ್ಧಾಂತ, ನಂಬಿಕೆ, ಧರ್ಮ ಹಾಗೂ ಜಾತಿ ಹೊಂದಿರುವ ಜನರು ನೆಲಸಿದ್ದಾರೆ. ಒಂದರ್ಥದಲ್ಲಿ ಈ ರಾಜ್ಯವು ಬಗೆ ಬಗೆಯ ಹೂಗಳಿರುವ ಗುಚ್ಛದಂತೆ. ಜನರು ಕೂಡ ಈ ರೀತಿ ಬದುಕಬೇಕು ಎಂಬುದನ್ನು ನಿರೀಕ್ಷಿಸುತ್ತಿದ್ದೇವೆ' ಎಂದು ರಾಹುಲ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕಎಫ್ಸ್ಟೈನ್ ಫೈಲ್ ಮುಂದಿಟ್ಟುಕೊಂಡು ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಯಂತ್ರಿಸುತ್ತಿದ್ದಾರೆ. ಅದಾನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಟ್ರಂಪ್ ಹೊಂದಿದ್ದು ಅಮೆರಿಕದಲ್ಲಿ ಅದಾನಿ ವಿರುದ್ಧ ಕ್ರಿಮಿನಲ್ ಪ್ರಕರಣ ಕೂಡ ದಾಖಲಾಗಿದೆ.
ಸಿಎಪಿಎಫ್ ಕಾನೂನು ರದ್ದು: ರಾಹುಲ್ ಭರವಸೆ ನವದೆಹಲಿ (ಪಿಟಿಐ): 'ಕೇಂದ್ರಿಯ ಸಶಸ್ತ್ರ ಪಡೆಗಳ (ಸಿಎಪಿಎಫ್) ನಡುವಿನ ತಾರತಮ್ಯ ಮುಂದುವರಿಸಲು ಕೇಂದ್ರ ಸರ್ಕಾರ ಬಯಸಿದೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ತಾರತಮ್ಯ ಎಸಗುವ ಕಾನೂನನ್ನು ಹಿಂದಕ್ಕೆ ಪಡೆಯುತ್ತೇವೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. 'ಈ ಕುರಿತಂತೆ ಲೋಕಸಭೆಯಲ್ಲಿ ಮಾತನಾಡುವುದಾಗಿ ತಿಳಿಸಿದ್ದೆನು. ಆದರೆ ಇದಕ್ಕೆ ಅವಕಾಶ ನೀಡಲಿಲ್ಲ. ಸಿಆರ್ಪಿಎಫ್ ಬಿಎಸ್ಎಫ್ ಸಿಐಎಸ್ಎಫ್ ಹಾಗೂ ಐಟಿಬಿಪಿ ಪಡೆಗಳ ಜೊತೆಗೆ ಕಾಂಗ್ರೆಸ್ ಪಕ್ಷವು ನಿಲ್ಲಲಿದ್ದು ಅವರ ರಕ್ಷಣೆಯನ್ನು ಮಾಡಲಿದೆ' ಎಂದು ವಿಡಿಯೊ ಸಂದೇಶದ ಮೂಲಕ ಭರವಸೆ ನೀಡಿದ್ದಾರೆ. 'ಅರೆ ಸೇನಾ ಪಡೆಗಳಲ್ಲಿ 15 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೂ ಕೂಡ ಯಾವುದೇ ಬಡ್ತಿಯಿಲ್ಲ. ತನ್ನದೇ ಪಡೆಯನ್ನು ಮುನ್ನಡೆಸುವ ಜವಾಬ್ದಾರಿ ಸಿಗುವುದಿಲ್ಲ. ಮೇಲ್ಮಟ್ಟದ ಎಲ್ಲಾ ಹುದ್ದೆಗಳನ್ನು ಐಪಿಎಸ್ ಅಧಿಕಾರಿಗಳಿಗೆ ಮೀಸಲಿಡಲಾಗಿದೆ. ಇದು ಒಬ್ಬ ಅಧಿಕಾರಿಯ ನೋವಲ್ಲ ಇದು ಆ ಪಡೆಗಳಲ್ಲಿ ಕೆಲಸ ಮಾಡಲು ಲಕ್ಷಾಂತರ ಯೋಧರ ನೋವು ಆಗಿದೆ' ಎಂದು ಹೇಳಿದ್ದಾರೆ.

