ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ ಹೀಗೆಯೇ ಮುಂದುವರಿದರೆ ಯುರೋಪಿನಾದ್ಯಂತ ತೈಲದ ಅಭಾವ ಸೃಷ್ಟಿಯಾಗಲಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಮುಖ್ಯಸ್ಥ ಫಾತಿಹ್ ಬಿರೋಲ್ ಬುಧವಾರ (ಏ.1) ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯ ಸಂಚಾರವನ್ನು ತೀವ್ರವಾಗಿ ನಿರ್ಬಂಧಿಸುವುದರಿಂದ ಪಶ್ಚಿಮ ಏಷ್ಯಾದಿಂದ ತೈಲ ಪೂರೈಕೆಯಲ್ಲಿ ಅಡಚಣೆಗಳು ಉಂಟಾಗಲಿದೆ.
ಇದು ಏಪ್ರಿಲ್‌ನಲ್ಲಿ ಮತ್ತಷ್ಟು ಹೆಚ್ಚಾಗಲಿದ್ದು, ಯುರೋಪಿನ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಫಾತಿಹ್ ಬಿರೋಲ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಶುರುವಾದಾಗಿನಿಂದ, ಈ ಪ್ರದೇಶದಲ್ಲಿನ ಇಂಧನ ಸ್ವತ್ತುಗಳ ಮೇಲೆ ಇರಾನ್ ನಡೆಸಿದ ದಾಳಿಗಳು ಮತ್ತು ಜಲಸಂಧಿಯ ಮೂಲಕ ಸಾಗಣೆಯ ಮೇಲಿನ ನಿರ್ಬಂಧಗಳಿಂದಾಗಿ 12 ಮಿಲಿಯನ್ ಬ್ಯಾರೆಲ್‌ಗಳಿಗೂ ಹೆಚ್ಚು ತೈಲ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
'ಏಪ್ರಿಲ್‌ನಲ್ಲಿ ತೈಲ ನಷ್ಟವು ಮಾರ್ಚ್‌ನಲ್ಲಿನ ತೈಲ ನಷ್ಟಕ್ಕಿಂತ ಎರಡು ಪಟ್ಟು ಹೆಚ್ಚಾಗುತ್ತದೆ. ಎಲ್‌ಎನ್‌ಜಿ ನಷ್ಟದ ಜೊತೆಗೆ ಅನೇಕ ದೇಶಗಳಲ್ಲಿ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಮಾರ್ಚ್‌ನಲ್ಲಿ ಆಗಿರುವ ಒಪ್ಪಂದದಂತೆ ಹಲವು ತೈಲ ಮತ್ತು ಎಲ್‌ಎನ್‌ಜಿ ಹಡಗುಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪದಿರುವುದರಿಂದ ಏಪ್ರಿಲ್‌ನಲ್ಲಿ ನಷ್ಟವು ಹೆಚ್ಚಾಗುವ ನಿರೀಕ್ಷೆಯಿದೆ. ಅತಿದೊಡ್ಡ ಸಮಸ್ಯೆ ಎಂದರೆ ವಿಮಾನದ ಇಂಧನ ಮತ್ತು ಡೀಸೆಲ್ ಕೊರತೆ ಈಗಾಗಲೇ ಏಷ್ಯಾದ ದೇಶಗಳ ಮೇಲೆ ಪರಿಣಾಮ ಬೀರಿದೆ. ಆದರೆ ಮುಂದಿನ ದಿನಗಳಲ್ಲಿ ಇದು ಯುರೋಪ್‌ನ ಮೇಲೂ ಪರಿಣಾಮ ಬೀರಲಿದೆ' ಎಂದು ಬಿರೋಲ್ ಹೇಳಿದ್ದಾರೆ.

