HEALTH TIPS

ಏಳು ವರ್ಷದಲ್ಲಿ ಮೊದಲ ಬಾರಿಗೆ ಇರಾನ್‍ನಿಂದ ತೈಲ ಖರೀದಿಸಿದ ಭಾರತ

 ನವದೆಹಲಿ: ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತೈಲ ಶುದ್ಧೀಕರಣ ಘಟಕಗಳು ಇರಾನ್‍ನಿಂದ ಕಚ್ಚಾತೈಲವನ್ನು ಖರೀದಿಸಿವೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಾಣಿಕೆ ಹಡಗುಗಳ ಸಂಚಾರ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೈಲ ಸಚಿವಾಲಯ ಶನಿವಾರ ಪ್ರಕಟಿಸಿದೆ.


ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮಾಡಿಕೊಳ್ಳುವ ಮತ್ತು ಬಳಸುವ ದೇಶವಾಗಿರುವ ಭಾರತ 2019ರ ಮೇ ತಿಂಗಳ ಬಳಿಕ ಮೊದಲ ಬಾರಿಗೆ ಟೆಹರಾನ್‍ನಿಂದ ತೈಲವನ್ನು ಖರೀದಿಸಿದೆ. ಇರಾನ್‍ನಿಂದ ಕಚ್ಚಾ ತೈಲ ಖರೀದಿಸದಂತೆ ಅಮೆರಿಕ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಇರಾನ್‍ನಿಂದ ತೈಲ ಖರೀದಿ ನಿಲ್ಲಿಸಲಾಗಿತ್ತು. ಆದರೆ ಯುದ್ಧದ ಕಾರಣದಿಂದ ತೈಲ ಪೂರೈಕೆ ವ್ಯತ್ಯಯವಾಗಿದ್ದು, ಇದು ದೇಶದ ಮೇಲೆ ಗಂಭೀರ ಪರಿಣಾಮ ಬೀರಿದೆ.

"ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಭಾರತೀಯ ರಿಫೈನರಿಗಳು ಇರಾನ್ ಸೇರಿದಂತೆ ಕಚ್ಚಾ ತೈಲ ಅಗತ್ಯತೆಯನ್ನು ಪೂರೈಸಿಕೊಳ್ಳಲು ಕ್ರಮ ಕೈಗೊಂಡಿವೆ. ಇರಾನ್‍ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಪಾವತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲ" ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ.

ಪಾವತಿ ಸಮಸ್ಯೆಯ ಕಾರಾಣದಿಂದ ಭಾರತಕ್ಕೆ ಹೊರಟಿದ್ದ ಕಚ್ಚಾತೈಲ ಹೊತ್ತ ಹಡಗನ್ನು ಚೀನಾಗೆ ವಿಮುಖಗೊಳಿಸಲಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರ ಎಂದು ಸಚಿವಾಲಯ ಹೇಳಿದೆ. ಭಾರತ 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ವಿವಿಧ ಮೂಲಗಳಿಂದ ಖರೀದಿಸಲು ತೈಲ ಕಂಪನಿಗಳಿಗೆ ಅವಕಾಶವಿದೆ ಎಂದು ವಿವರಿಸಿದೆ.

ತೈಲ ಮತ್ತು ಶುದ್ಧೀಕರಣಗೊಂಡ ಉತ್ಪನ್ನಗಳ ಅಭಾವ ಪರಿಸ್ಥಿತಿ ನಿಭಾಯಿಸಲು ಅನುಕೂಲವಾಗುವಂತೆ ಇರಾನ್‍ನಿಂದ ಆಮದು ಮಾಡಿಕೊಳ್ಳಲು ಹೇರಿದ್ದ ನಿಷೇಧವನ್ನು ಅಮೆರಿಕ ಕಳೆದ ತಿಂಗಳು ತೆರವುಗೊಳಿಸಿತ್ತು. ಮುಂದಿನ ತಿಂಗಳುಗಳಲ್ಲಿ ಭಾರತಕ್ಕೆ ಅಗತ್ಯವಿರುವಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಸಚಿವಾಲಯ ಹೇಳಿದೆ.

ಇರಾನ್‍ನಿಂದ 44 ಸಾವಿರ ಮೆಟ್ರಿಕ್ ಟ್ರನ್ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಕೂಡಾ ಭಾರತ ಆಮದು ಮಾಡಿಕೊಂಡಿದೆ. ಇದು ಮಂಗಳೂರು ಬಂದರನ್ನು ಬುಧವಾರ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries