ಟೆಹ್ರಾನ್ : ಜನವರಿಯಲ್ಲಿ ಇರಾನ್ ನಲ್ಲಿ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಗಲ್ಲಿಗೇರಿಸಲಾಗಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿದ Aljazeera ವರದಿ ಮಾಡಿದ.
ಟೆಹ್ರಾನ್ ನಲ್ಲಿರುವ ಸೂಕ್ಷ್ಮ ಮಿಲಿಟರಿ ಕೇಂದ್ರದ ಮೇಲೆ ದಾಳಿ ನಡೆಸಿ ಅಲ್ಲಿನ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಪ್ರವೇಶ ಪಡೆಯಲು ಯತ್ನಿಸಿದ ಆರೋಪದ ಮೇರೆಗೆ ಮೊಹಮ್ಮದ್ ಅಮೀನ್ ಬಿಗ್ಲಾರಿ ಹಾಗೂ ಶಾಹಿನ್ ವಹೇದಿಪರಾಸ್ಟ್ ಅವರಿಗೆ ಮರಣದಂಡನೆ ಜಾರಿಗೊಳಿಸಲಾಗಿದೆ.
ಅವರನ್ನು "ಶತ್ರು ಏಜೆಂಟ್ ಗಳು" ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಜನವರಿಯಲ್ಲಿ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಆರಂಭವಾದ ಅಶಾಂತಿ ಕ್ರಮೇಣ ರಾಷ್ಟ್ರವ್ಯಾಪಿ ಪ್ರತಿಭಟನೆಗಳಾಗಿ ತಿರುಗಿತು.ಬಳಿಕ ಅದು ಇಸ್ಲಾಮಿಕ್ ಗಣರಾಜ್ಯವನ್ನು ಉರುಳಿಸಲು ಕರೆ ನೀಡುವ ಹೋರಾಟವಾಗಿ ರೂಪಾಂತರಗೊಂಡಿತ್ತು. ಈ ವೇಳೆ ಸರ್ಕಾರ ಕೈಗೊಂಡ ಕಠಿಣ ಕ್ರಮಗಳು 1979ರ ಕ್ರಾಂತಿಯ ನಂತರದ ಅತ್ಯಂತ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿದ್ದು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದರ ನಡುವೆ, ಹದಿಹರೆಯದ ಅಮೀರ್ಹೊಸ್ಸೇನ್ ಹತಾಮಿ ಅವರನ್ನು ಎಪ್ರಿಲ್ 2ರಂದು ಘೆಝೆಲ್ ಹೆಸರ್ʼ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿದೆ. ಬಿಗ್ಲಾರಿ ಹಾಗೂ ವಹೇದಿಪರಾಸ್ಟ್ ಅವರು ಮರಣದಂಡನೆ ಅಪಾಯದಲ್ಲಿದ್ದಾರೆ ಎಂದು ಅಮ್ನೆಸ್ಟಿ ಈ ಹಿಂದೆಯೇ ಉಲ್ಲೇಖಿಸಿತ್ತು.
ಅದೇ ವೇಳೆ, ಅಲಿ ಫಾಹಿಮ್ ಮತ್ತು ಅಬೋಲ್ಫಝಲ್ ಸಲೇಹಿ ಸಿಯಾವಶಾನಿ ಎಂಬ ಇನ್ನಿಬ್ಬರೂ ಮರಣದಂಡನೆಗೆ ಗುರಿಯಾಗುವ ಅಪಾಯದಲ್ಲಿದ್ದಾರೆ ಎಂದು ಅಮ್ನೆಸ್ಟಿ ಎಚ್ಚರಿಸಿದೆ.
ಪ್ರತಿಭಟನೆಯ ವೇಳೆ ವಿದೇಶಿ ಏಜೆಂಟ್ ಗಳು ನುಸುಳಿ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಇರಾನ್ ಅಧಿಕಾರಿಗಳು ಮುಂದಿಟ್ಟಿದ್ದಾರೆ.

