ವಾಷಿಂಗ್ಟನ್: ಎರಡು ವಾರಗಳ ಯುದ್ಧ ವಿರಾಮ ಅಂತ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಅದಕ್ಕೂ ಮುನ್ನವೇ ಅನಿರ್ದಿಷ್ಟಾವಧಿಗೆ ಯುದ್ಧ ವಿರಾಮ ವಿಸ್ತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಇರಾನ್ ನಾಯಕರು ಮತ್ತು ಪ್ರತಿನಿಧಿಗಳು ಏಕರೂಪದ ಪ್ರಸ್ತಾವನೆಯೊಂದಿಗೆ ಬರುವವರೆಗೆ ಯುದ್ಧ ವಿರಾಮ ಮುಂದುವರಿಸುತ್ತೇವೆ.
ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ವಿನಂತಿಗೆ ತಾನು ಒಪ್ಪಿಕೊಂಡಿದ್ದೇನೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇರಾನ್ ಪ್ರಸ್ತಾವನೆ ಸಲ್ಲಿಸುವವರೆಗೆ ಮತ್ತು ಚರ್ಚೆಗಳು ಒಂದು ನಿರ್ಣಾಯಕ ಹಂತಕ್ಕೆ ಬರುವವರೆಗೆ ಎರಡು ವಾರಗಳ ಹಿಂದೆ ಆರಂಭವಾದ ಯುದ್ಧ ವಿರಾಮ ವಿಸ್ತರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಂಗಳವಾರವಷ್ಟೇ ಪಾಕಿಸ್ತಾನದ ಪ್ರಸ್ತಾವನೆ ಕುರಿತು ಉತ್ತರಿಸಿದ್ದ ಟ್ರಂಪ್, ಯುದ್ಧ ವಿರಾಮ ವಿಸ್ತರಣೆ ಇಲ್ಲ. ಇರಾನ್ ಮೇಲೆ ಬಾಂಬ್ ನಡೆಸುತ್ತೇವೆ ಎಂದು ಹೇಳಿದ್ದರು. ಹಗಲು ಕಳೆದು ರಾತ್ರಿಯಾಗುವಷ್ಟರಲ್ಲಿ ಟ್ರಂಪ್ ತಮ್ಮ ಹೇಳಿಕೆ ಬದಲಿಸಿದ್ದಾರೆ.
ಇರಾನ್‌ನಲ್ಲಿನ ವಿದ್ಯುತ್ ಸ್ಥಾವರಗಳು ಮತ್ತು ಇತರ ನಾಗರಿಕ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಟ್ರಂಪ್ ಗುಡುಗಿದ್ದರು. ಅಂತಹ ದಾಳಿಗಳನ್ನು ಅಂತರರಾಷ್ಟ್ರೀಯ ಮಾನವೀಯ ಕಾನೂನು ನಿಷೇಧಿಸುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಇತರ ದೇಶಗಳ ನಾಯಕರು ಹೇಳಿದ್ದರು.
ಫೆಬ್ರುವರಿ 28ರಂದು ಇಸ್ರೇಲ್ ಜೊತೆ ಇರಾನ್ ವಿರುದ್ಧ ಯುದ್ಧ ಆರಂಭಿಸಿದ್ದ ಟ್ರಂಪ್, ಇರಾನ್ ಸರ್ಕಾರ ಗಂಭೀರವಾಗಿ ಹಾನಿಗೊಳಗಾಗಿದೆ. ಹಾಗಾಗಿ, ಯುದ್ಧ ವಿರಾಮ ವಿಸ್ತರಿಸುತ್ತಿದ್ದೇನೇ ಹೊರತು ಅನಿರೀಕ್ಷಿತವಾಗಿ ಅಲ್ಲ ಎಂದಿದ್ದಾರೆ.
ಇದೇವೇಳ, ಇರಾನ್‌ನ ಬಂದರುಗಳು ಮತ್ತು ಕರಾವಳಿಯ ಮೇಲೆ ಅಮೆರಿಕ ನೌಕಾಪಡೆಯ ದಿಗ್ಬಂಧನವನ್ನು ಮುಂದುವರಿಸುವುದಾಗಿ ಟ್ರಂಪ್ ಹೇಳಿದ್ದಾರೆ.

