ಕಠ್ಮಂಡು: ತಮ್ಮ ಅಧಿಕಾರದ ಅವಧಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದ ಹಿನ್ನೆಲೆ ನೇಪಾಳದ ಗೃಹ ಸಚಿವ ಸುದನ್ ಗುರುಂಗ್ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ವಿವಿಧ ಕಂಪನಿಗಳಲ್ಲಿ ಗುರುಂಗ್, ಷೇರು ಖರೀದಿ ಮಾಡಿದ್ದಾರೆ ಎಂಬ ಮಾಧ್ಯಮ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ.
ಮಾರ್ಚ್ 27 ರಂದು ಅವರು ಗೃಹ ಸಚಿವರಾಗಿ ನೇಮಕಗೊಂಡಿದ್ದರು.
ತಮ್ಮ ಹಣಕಾಸು ವ್ಯವಹಾರಗಳ ಬಗ್ಗೆ ನಿಪಕ್ಷಪಾತ ತನಿಖೆ ನಡೆಸಲು ಅನುಕೂಲವಾಗವಂತೆ ಮತ್ತು ಅಧಿಕಾರದಲ್ಲಿದ್ದಾಗ ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಲು(ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ) ರಾಜೀನಾಮೆ ನೀಡುತ್ತಿರುವುದಾಗಿ ಗುರುಂಗ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ನನಗೆ ಸ್ಥಾನಕ್ಕಿಂತ ನೈತಿಕತೆ ಮುಖ್ಯ. ಸಾರ್ವಜನಿಕ ನಂಬಿಕೆಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ. ಇಂದು ದೇಶದಲ್ಲಿ ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಯಸುತ್ತಿರುವ ದೇಶದ ಇಂದಿನ ಜೆನ್ ಝೀ (Gen Z) ಚಳವಳಿ ಕೂಡ ಇದೇ ಸಂದೇಶವನ್ನು ನೀಡಿದೆ. ಸಾರ್ವಜನಿಕ ಜೀವನವು ಸ್ವಚ್ಛವಾಗಿರಬೇಕು ಮತ್ತು ನಾಯಕತ್ವವು ಜವಾಬ್ದಾರಿಯುತವಾಗಿರಬೇಕು ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನ ಮಂತ್ರಿ ಬಾಲೆಂದ್ರ ಶಾ ಅವರು ರಾಜೀನಾಮೆಯನ್ನು ಸ್ವೀಕರಿಸಿದ್ದು, ಸದ್ಯಕ್ಕೆ ಗೃಹ ಸಚಿವಾಲಯದ ಹೊಣೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಜೆನ್ ಝೀ ಚಳವಳಿಯ ಸಮಯದಲ್ಲಿ ಗುರುಂಗ್ ಅವರು ಸಕ್ರಿಯರಾಗಿದ್ದರು. ಅಲ್ಲದೇ ಬಾಲೆಂದ್ರ ಶಾ ಮತ್ತು ರಾಷ್ಟ್ರೀಯ ಸ್ವತಂತ್ರ ಪಾರ್ಟಿಯ (RSP) ರವಿ ಲಮಿಛಾನೆ ನಡುವೆ ಮೈತ್ರಿ ಏರ್ಪಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದಕ್ಕೂ ಮುನ್ನ ಏಪ್ರಿಲ್ 9ರಂದು, ಅಧಿಕಾರ ದುರುಪಯೋಗದ ಆರೋಪದ ಮೇಲೆ, ಕಾರ್ಮಿಕ ಸಚಿವ ದೀಪ್ ಕುಮಾರ್ ಶಾ ಅವರನ್ನು ಪ್ರಧಾನಿ ಬಾಲೆಂದ್ರ ಶಾ ವಜಾಗೊಳಿಸಿದ್ದರು.

