ಹೈದರಾಬಾದ್: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ (ಏಪ್ರಿಲ್ 10) ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಏಪ್ರಿಲ್ 5ರಂದು ಪತ್ರಿಕಾಗೋಷ್ಠಿಯಲ್ಲಿ ಪವನ್ ಖೇರಾ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ರಿನಿಕಿ ಭುಯಾನ್ ಶರ್ಮಾ ಅವರು ಹಲವು ರಾಷ್ಟ್ರಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ. ಆದರೆ ಅವರು ಚುನಾವಣಾ ಅಫಿಡವಿಟ್‌ನಲ್ಲಿ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದ್ದರು. ಆದರೆ ಖೇರಾ ಅವರ ಆರೋಪಗಳನ್ನು ಶರ್ಮಾ ಅವರು ಅಲ್ಲಗಳೆದಿದ್ದರು.
ಈ ಸಂಬಂಧ ರಿನಿಕಿ ಭುಯಾನ್ ಶರ್ಮಾ ಅವರು ಖೇರಾ ವಿರುದ್ಧ ಗುವಾಹಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಂತೆ ಅಸ್ಸಾಂ ಪೊಲೀಸರ ತಂಡ ವಿಚಾರಣೆಗೆಂದು ದೆಹಲಿಯಲ್ಲಿರುವ ಖೇರಾ ಅವರ ನಿವಾಸಕ್ಕೆ ತೆರಳಿತ್ತು. ಆದರೆ ಖೇರಾ ಅವರು ನಿವಾಸದಲ್ಲಿರಲಿಲ್ಲ. ಬಳಿಕ ಖೇರಾ ಹೈದರಾಬಾದ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.

