ನವದೆಹಲಿ: ಜಾತಿ ಸಮೀಕ್ಷೆಗೆ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಅಲ್ಲದೇ, ಪಿಐಎಲ್ನಲ್ಲಿ ಬಳಸಿದ ಭಾಷೆ ಕುರಿತಂತೆ ಕೋರ್ಟ್, ಅರ್ಜಿದಾರನನ್ನು ತರಾಟೆಗೆ ತೆಗೆದುಕೊಂಡಿದೆ.
'ನಿಮ್ಮ ಅರ್ಜಿಯಲ್ಲಿ ಅಸಭ್ಯ ಭಾಷೆ ಬಳಸಿದ್ದೀರಿ. ನಿಮ್ಮ ಅರ್ಜಿಯನ್ನು ಬರೆದವರು ಯಾರು?'ಎಂದು ಕೋಪಗೊಂಡ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಖುದ್ದು ಹಾಜರಾಗಿದ್ದ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅರ್ಜಿಯಲ್ಲಿ ಅಂತಹ ಭಾಷೆಯನ್ನು ಬಳಸಿದ್ದು ಹೇಗೆ? ಯಾರಿಂದ ಬರೆಸಿದ್ದೀರಿ ಎಂದು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರನ್ನೂ ಒಳಗೊಂಡ ಪೀಠದ ನೇತೃತ್ವ ವಹಿಸಿದ್ದ ಸಿಜೆಐ ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ.
ಒಂದೇ ಮಗುವನ್ನು ಹೊಂದಿರುವ ಕುಟುಂಬಗಳಿಗೆ ಆರ್ಥಿಕ ನೆರವನ್ನು ಒದಗಿಸಲು ನೀತಿ ರೂಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಮನವಿಯನ್ನೂ ಪೀಠ ವಜಾಗೊಳಿಸಿದೆ.
2027ರ ಜನಗಣತಿಯಲ್ಲಿ ನಾಗರಿಕರ ಜಾತಿ ಡೇಟಾವನ್ನು ದಾಖಲಿಸಲು, ವರ್ಗೀಕರಿಸಲು ಮತ್ತು ಪರಿಶೀಲಿಸಲು ಅಳವಡಿಸಿಕೊಳ್ಳಬೇಕಾದ ವಿಧಾನವನ್ನು ಪ್ರಶ್ನಿಸುವ ಪ್ರತ್ಯೇಕ ಪಿಐಎಲ್ ಅನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಫೆಬ್ರುವರಿ 2 ರಂದೇ ನಿರಾಕರಿಸಿತ್ತು. ಹಾಗಾಗಿ, ಈ ಕುರಿತ ಪಿಐಎಲ್ಗಳನ್ನು ವಿಚಾರಣೆಗೆ ಪರಿಗಣಿಸುತ್ತಿಲ್ಲ.
ಇದು ದೇಶದ 16ನೇ ರಾಷ್ಟ್ರೀಯ ಜನಗಣತಿಯಾಗಿದ್ದು, 1931 ರಿಂದ ಸಮಗ್ರ ಜಾತಿ ಗಣತಿ ಮತ್ತು ಸಂಪೂರ್ಣ ಡಿಜಿಟಲ್ ಆಗಿರುವ ದೇಶದ ಮೊದಲ ಜಾತಿಗಣತಿಯಾಗಿದೆ.

