ಕಾಸರಗೋಡು: ಮಲೇರಿಯಾ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಲೇರಿಯಾ ವಿರುದ್ಧ ದಿನಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಾಲಿಕಡವು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಸಲಾಯಿತು.
ಜಿಲ್ಲಾ ವೆಕ್ಟರ್ ಬೋನ್ ನಿಯಂತ್ರಣ ಅಧಿಕಾರಿ ಕೆ.ವಿ. ಗಿರೀಶ್ ಸಮಾರಂಭ ಉದ್ಘಾಟಿಸಿರು. ಕಾರ್ಯಕ್ರಮದ ಅಂಗವಾಗಿ, ಮಲೇರಿಯಾ ಮತ್ತು ಕ್ಷಯರೋಗ ಪತ್ತೆ ಹಚ್ಚುವ ನಿಟ್ಟಿನಲ್ಲಿ ಅತಿಥಿ ಕಾರ್ಮಿಕರು ಮತ್ತು ಸ್ಥಳೀಯ ಜನರಿಗಾಗಿ ರಕ್ತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಜತೆಗೆ ಜೀವನಶೈಲಿ ರೋಗನಿರ್ಣಯ, ಕ್ಷಯರೋಗ ರೋಗನಿರ್ಣಯಕ್ಕಾಗಿ ಕಫ ಪರೀಕ್ಷೆ ಮತ್ತು ಚರ್ಮ ರೋಗ ನಿರ್ಣಯ ತಪಾಸಣೆ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಅತಿಥಿ ಕಾರ್ಮಿಕರು ಸೇರಿದಂತೆ 200 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಪಿಲಿಕೋಡ್ ಗ್ರಾಮ ಪಂಚಾಯಿತಿ ಮತ್ತು ಓಲಟ್ ಕುಟುಂಬ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಓಲಟ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಲಿನಿಜೋಯ್ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಆರೋಗ್ಯ ನರ್ಸ್ ಬೀನಾ ಕೆ.ವಿ ಮತ್ತು ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಎಂ. ವಿನೋದ್ ಕುಮಾರ್ ಉಪಸ್ಥಿತರಿದ್ದರು. ಕುಂಬಳೆ ಸಮುದಾಯ ಆರೋಗ್ಯ ನಿರೀಕ್ಷಕ ಸಿ.ಕೆ. ಅರುಣ್ಕುಮಾರ್ ಅತಿಥಿ ಕಾರ್ಮಿಕರಿಗೆ ಜಾಗೃತಿ ತರಗತಿ ನಡೆಸಿದರು. ಓಲಾಟ್ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಪಿ.ವಿ. ಮಹೇಶ್ ಕುಮಾರ್ ಸ್ವಾಗತಿಸಿದರು. ಕಿರಿಯ ಆರೋಗ್ಯ ನಿರೀಕ್ಷಕ ಜಾವಿದ್ ಹುಸೇನ್ ವಂದಿಸಿದರು.



