ಕಾಸರಗೋಡು: ರಾಜ್ಯ ನೌಕರರ ತುಟ್ಟಿಭತ್ಯೆ, ವೇತನ ಪರಿಷ್ಕರಣೆ ಮತ್ತು ರಜೆ ಶರಣಾಗತಿ ಸೇರಿದಂತೆ ವಿವಿಧ ಸವಲತ್ತುಗಳನ್ನು ಸಕಾಲದಲ್ಲಿ ಮಂಜೂರು ಮಾಡಬೇಕು ಎಂದು ಕೇರಳ ಸರ್ಕಾರೇತರ ಸಂಘ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ರಾಜೇಶ್ ಆಗ್ರಹಿಸಿದ್ದಾರೆ. ಅವರು ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಂಘಟನೆ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಪಿಣರಾಯಿ ವಿಜಯನ್ ಸರ್ಕಾರದ ನೌಕರರ ಹಿತಾಸಕ್ತಿ ನಿರ್ಲಕ್ಷಿಸುವ ಮತ್ತು ಸವಲತ್ತು ತಡೆಹಿಡಿಯುವ ನೀತಿಯು ನಾಗರಿಕ ಸೇವೆಯ ದಕ್ಷತೆಯನ್ನು ನಾಶಪಡಿಸಿದೆ. ಸರ್ಕಾರದ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕೆಲಸ ಮಾಡುವ ನೌಕರರ ವಿಶ್ವಾಸ ಗಳಿಸುವುದರಿಂದ ಮಾತ್ರ ತೃಪ್ತಿಕರ ಮತ್ತು ಪರಿಣಾಮಕಾರಿ ನಾಗರಿಕ ಸೇವೆ ಸಾಧ್ಯವಾಗಲಿದೆ. ಹೊಸ ಸರ್ಕಾರದಿಂದ ನೌಕರರು ಇದನ್ನು ನಿರೀಕ್ಷಿಸುವುದಾಗಿ ತಿಳಿಸಿದರು.
ಜಿಲ್ಲಾಧ್ಯಕ್ಷ ಕೆ. ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಕೋಶಾಧಿಕಾರಿ ಸಜೀವನ್ ಚಟ್ಟೋತ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ. ಪೀತಾಂಬರನ್, ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಪಿ. ದಿನೇಶ್, ಎನ್‍ಟಿಯು ಜಿಲ್ಲಾ ಅಧ್ಯಕ್ಷ ಕೃಷ್ಣನ್ ಮಾಸ್ಟರ್, ಎಫ್‍ಇಟಿಒ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಕೆ, ಎನ್‍ಜಿಒ ಸಂಘದ ಜಿಲ್ಲಾ ಕಾರ್ಯದರ್ಶಿ ಸುನಿಲ್ ಪಿ.ಸಿ, ಜಿಲ್ಲಾ ಸಮಿತಿ ಕೋಶಾಧಿಕಾರಿ ಕೆ. ರವಿಕುಮಾರ್ ಉಪಸ್ಥಿತರಿದ್ದರು.
ಜಿಲ್ಲೆಯ ಅತ್ಯುತ್ತಮ ಗ್ರಾಮಾಧಿಕಾರಿಯಾಗಿ ಆಯ್ಕೆಯಾದ ಜಯಲಕ್ಷ್ಮಿ ಮತ್ತು ಅತ್ಯುತ್ತಮ ಬೂತ್ ಮಟ್ಟದ ಅಧಿಕಾರಿಯಾಗಿ ಆಯ್ಕೆಯಾದ ರಾಜೇಶ್ ಸಿ.ಎಚ್. ಅವರನ್ನು ಸನ್ಮಾನಿಸಲಾಯಿತು.

