ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 2026-27ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಪಠ್ಯಕ್ರಮವನ್ನು ಜಾರಿಗೆ ತಂದಿದ್ದು, ಇದರ ಪ್ರಕಾರ 6ನೇ ತರಗತಿಯಿಂದ ಕಡ್ಡಾಯವಾಗಿ ತ್ರಿಭಾಷಾ ಸೂತ್ರವನ್ನು ಅಳವಡಿಸಲಾಗುತ್ತದೆ.
ಇದರೊಂದಿಗೆ 9ನೇ ತರಗತಿಯ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯವನ್ನು ಎರಡು ಹಂತಗಳಲ್ಲಿ ಅಧ್ಯಯನ ನಡೆಸಬಹುದಾದ ಹೊಸ ನೀತಿಯನ್ನೂ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ಕಡ್ಡಾಯಗೊಳಿಸಲಾಗಿರುವ ತ್ರಿಭಾಷಾ ಸೂತ್ರವನ್ನು 6ನೇ ತರಗತಿಯಿಂದ ಪ್ರಾರಂಭಿಸಲಾಗುವುದು (ಮೂರನೇ ಭಾಷೆ ಕಡ್ಡಾಯ). ಈ ವಿಷಯಗಳನ್ನು ಆರ್1, ಆರ್2 ಮತ್ತು ಆರ್3 ಎಂದು ಗುರುತಿಸಲಾಗಿದೆ. ಆದರೆ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಇನ್ನೂ ಕಡ್ಡಾಯಗೊಳಿಸಿಲ್ಲ. ರಾಷ್ಟ್ರೀಯ ಪಠ್ಯಕ್ರಮ ರೂಪುರೇಷೆ (ಎನ್‌ಸಿಎಫ್) ಶಿಫಾರಸು ಮಾಡಿರುವಂತೆ, ಮೂರರ ಪೈಕಿ ಎರಡು ಭಾರತದ ಸ್ಥಳೀಯ ಭಾಷೆಗಳಾಗಿರಬೇಕು.
9ನೇ ತರಗತಿಯ ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರಮಾಣಿತ ಸ್ವರೂಪದಲ್ಲಿ, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಮೊದಲ ಹಂತದಲ್ಲಿ ಅಧ್ಯಯನ ಮಾಡುತ್ತಾರೆ. ಈ ಎರಡೂ ವಿಷಯಗಳಲ್ಲಿ ಐಚ್ಛಿಕವಾಗಿ, ಮುಂದುವರಿದ ಕೋರ್ಸ್ ರೂಪದಲ್ಲಿ ಎರಡನೇ ಹಂತದಲ್ಲಿಯೂ ಅಧ್ಯಯನ ಮಾಡಬಹುದು.
ಎಲ್ಲಾ ವಿದ್ಯಾರ್ಥಿಗಳು ಪ್ರಮಾಣಿತ ಪಠ್ಯಕ್ರಮವನ್ನು ಕಡ್ಡಾಯವಾಗಿ ಅಧ್ಯಯನ ಮಾಡುತ್ತಾರೆ. 80 ಅಂಕಗಳಿಗೆ ನಡೆಸುವ 3 ಗಂಟೆಯ ಪರೀಕ್ಷೆಗೂ ಹಾಜರಾಗುತ್ತಾರೆ. ಆದರೆ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಐಚ್ಛಿಕ ಹಂತವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು 25 ಅಂಕಗಳಿಗೆ 1 ಗಂಟೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
ಐಚ್ಛಿಕ ಹಂತದಲ್ಲಿ ನಡೆಯುವ ಪರೀಕ್ಷೆಯ ಅಂಕಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಪರಿಗಣಿಸಲಾಗುವುದಿಲ್ಲ. ಆದರೆ ಶೇ 50 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ಅಂಕಗಳನ್ನು ತೋರಿಸಲಾಗುತ್ತದೆ.
9 ಮತ್ತು 10ನೇ ತರಗತಿಗೆ, ಸಮಸ್ಯೆ ಬಗೆಹರಿಸುವ ಕೌಶಲ (ಕಂಪ್ಯೂಟೇಷನಲ್ ಥಿಂಕಿಂಗ್), ಕೃತಕ ಬುದ್ಧಿಮತ್ತೆ (ಎ.ಐ) ವಿಷಯಗಳನ್ನೂ ಕಡ್ಡಾಯಗೊಳಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ವಿಷಯಗಳನ್ನು ಆಂತರಿಕ ಮೌಲ್ಯಮಾಪನಕ್ಕಾಗಿ ಪ್ರಾಯೋಗಿಕವಾಗಿ ಅಳವಡಿಸಲಾಗುವುದು. 2029ರಿಂದ ಈ ವಿಷಯಗಳು 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಕಡ್ಡಾಯ ವಿಷಯಗಳಾಗಿರುತ್ತವೆ.
ಹೊಸ ಪಠ್ಯಕ್ರಮದಲ್ಲಿ ಕಲಾ ಶಿಕ್ಷಣ, ವೃತ್ತಿಪರ ಶಿಕ್ಷಣ ಹಾಗೂ ದೈಹಿಕ ಶಿಕ್ಷಣವನ್ನು 9 ಮತ್ತು 10ನೇ ತರಗತಿಗೆ ಕಡ್ಡಾಯ ವಿಷಯಗಳನ್ನಾಗಿ ಪರಿಚಯಿಸಲಾಗುತ್ತಿದೆ. 2027-28ರ ಶೈಕ್ಷಣಿಕ ಅವಧಿಯಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ವೃತ್ತಿಪರ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.

