ಕೋಲ್ಕತ್ತ: ಜನರು ಬದಲಾವಣೆಗಾಗಿ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಪ್ರಾಚೀನ ಸಾಮ್ರಾಜ್ಯಗಳಾದ 'ಅಂಗ, ವಂಗ ಮತ್ತು ಕಳಿಂಗ'ದಲ್ಲಿ (ಇಂದಿನ ಅಸ್ಸಾಂ, ಬಂಗಾಳ ಮತ್ತು ಒಡಿಶಾ) ಮುಂದಿನ ತಿಂಗಳು ಬಿಜೆಪಿ ಸರ್ಕಾರ ಇರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪ್ರತಿಪಾದಿಸಿದ್ದಾರೆ.
ಕೋಲ್ಕತ್ತದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ. ಗುರುವಾರ ನಡೆದ ಮೊದಲ ಹಂತದಲ್ಲಿ ಚುನಾವಣೆಯಲ್ಲಿ 152 ಕ್ಷೇತ್ರಗಳ ಪೈಕಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶೇ 92 ಕ್ಕಿಂತ ಹೆಚ್ಚಿನ ಮತದಾನವಾಗಿದೆ. ಬಂಗಾಳದ ಜನರು ಮೊದಲ ಹಂತದಲ್ಲಿಯೇ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಬದಲಾವಣೆಗಾಗಿ ಅವರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
2016ರ ವಿಧಾನಸಭಾ ಚುನಾವಣೆಯಲ್ಲಿ 1,278 ಮಂದಿ, 2021ರಲ್ಲಿ 1,681 ಜನ ಗಾಯಗೊಂಡಿದ್ದರು. ಈ ಬಾರಿ ಮೊದಲ ಹಂತದ ಚುನಾವಣೆಯಲ್ಲಿ ಯಾವುದೇ ಸಾವು ನೋವು ಸಂಭವಿಸದಂತೆ ನೋಡಿಕೊಂಡಿದ್ದಕ್ಕಾಗಿ ಚುನಾವಣಾ ಆಯೋಗ ಮತ್ತು ಭದ್ರತಾ ಪಡೆಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ನಿರ್ಗಮಿಸಲಿದೆ. ಮೇ 5ರ ನಂತರ 'ಅಂಗ , ವಂಗ ಮತ್ತು ಕಳಿಂಗ'ದಲ್ಲಿ ನಮಗೆ ಸರ್ಕಾರಗಳಿರುತ್ತವೆ. ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ: ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಂಗಾಳದಲ್ಲಿ ಜನಿಸಿದ, ಬಂಗಾಳಿ ಮಾತನಾಡುವ ವ್ಯಕ್ತಿಯೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

