ಸ್ಪೀಡನ್ :ಕುಸಿಯುತ್ತಿರುವ ಶೈಕ್ಷಣಿಕ ಗುಣಮಟ್ಟವನ್ನು ಸರಿಪಡಿಸಲು ಸ್ವೀಡನ್ ಸರ್ಕಾರ ಶಾಲೆಗಳಿಂದ ಡಿಜಿಟಲ್ ಸಾಧನಗಳನ್ನು ಹೊರಗಿಡಲು ನಿರ್ಧರಿಸಿದೆ.
ಸ್ವೀಡನ್ ಸಾಂಪ್ರದಾಯಿಕ ಶಿಕ್ಷಣಕ್ಕೆ ಮರಳುತ್ತಿದೆ. ತೀವ್ರ ಡಿಜಿಟಲೀಕರಣದ ನಂತರ ದೇಶದ ಮಕ್ಕಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ ಕಳಪೆ ಫಲಿತಾಂಶ ಪಡೆದುಕೊಂಡಿರುವುದು ಬಹಳ ಗಾಬರಿಯ ವಿಚಾರ ಎಂದು ಸ್ವೀಡನ್ನ ಶಿಕ್ಷಣ ಸಚಿವೆ ಲೊಟ್ಟಾ ಡ್ಹೋಮ್ ಹೇಳಿದ್ದಾರೆ.
ಹಿಂದಿನ ಐದು ವರ್ಷಗಳಿಂದ ಶಿಕ್ಷಣವನ್ನು ಡಿಜಿಟಲೀಕರೀಸಿದ ನಂತರ ಮಕ್ಕಳ ಓದುವ ಗ್ರಹಿಕೆಯ ಕೌಶಲ್ಯಗಳು ಉನ್ನತ ಮಟ್ಟದಿಂದ ಮಧ್ಯಂತರಕ್ಕೆ ಇಳಿದಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಬಹಳ ಕಳಪೆ ಮಟ್ಟಕ್ಕೆ ಇಳಿದಿರದೇ ಇದ್ದರೂ ಸಾಮಾನ್ಯ ಮಾನದಂಡಗಳಿಗೆ ಹೋಲಿಸಿದರೆ ಚಿಂತಾಜನಕ ಸ್ಥಿತಿ ಎದುರಾಗಿದೆ ಎಂದು ಸರ್ಕಾರ ಹೇಳಿದೆ.
ಹೀಗಾಗಿ ಸ್ವೀಡನ್ ಸರ್ಕಾರ ತರಗತಿಗಳಲ್ಲಿ ಭೌತಿಕ ಪುಸ್ತಕಗಳು, ಕಾಗದ ಮತ್ತು ಪೆನ್ನುಗಳ ಮೇಲೆ ಹೊಸದಾಗಿ ಗಮನಹರಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಕುಸಿಯುತ್ತಿರುವ ಶೈಕ್ಷಣಿಕ ಗುಣಮಟ್ಟವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಈ ಬದಲಾವಣೆ ವಿದ್ಯಾರ್ಥಿಗಳ ಉದ್ಯೋಗವಕಾಶಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವ ವಾದವೂ ಕೇಳಿ ಬಂದಿದೆ.
ಶೈಕ್ಷಣಿಕ ಸಾಧನೆಯ ಮೌಲ್ಯಮಾಪನಕ್ಕಾಗಿ ಅಂತಾರಾಷ್ಟ್ರೀಯ ಸಂಘಟನೆ (ಐಇಎ) ನಡೆಸಿದ ಮೌಲ್ಯಮಾಪನದಲ್ಲಿ 9ರಿಂದ 10 ವರ್ಷಗಳ ಮಕ್ಕಳ ಗ್ರಹಿಕೆಯ ಕೌಶಲ್ಯವನ್ನು ಪರೀಕ್ಷಿಸಲಾಗಿದೆ. ಪರೀಕ್ಷೆಯಲ್ಲಿ ಓದುವ ಗ್ರಹಿಕೆಯ ಜೊತೆಗೆ ಮೂಲಭೂತ ವಿಜ್ಞಾನ ಮತ್ತು ಗಣಿತ ಕೌಶಲ್ಯಗಳನ್ನೂ ಅಳೆಯಲಾಗುತ್ತದೆ. 2013ರಿಂದ ಸ್ವೀಡನ್ ಮತ್ತು ಅದರ ನಾರ್ಡಿಕ್ ನೆರೆಹೊರೆಯ ವಿದ್ಯಾರ್ಥಿಗಳು ಮೌಲ್ಯಮಾಪನದ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ (PISA) ಹೆಚ್ಚು ಕಳಪೆ ಫಲಿತಾಂಶಗಳನ್ನು ದಾಖಲಿಸಿದ್ದಾರೆ. PISA ಅನ್ನು ಯುರೋಪಿಯನ್ ಶೈಕ್ಷಣಿಕ ಗುಣಮಟ್ಟದ ಮಾನದಂಡವೆಂದೇ ಪರಿಗಣಿಸಲಾಗುತ್ತದೆ.
ಡಿಜಿಟಲ್ ಕ್ರಾಂತಿಯ ನಂತರ ಬದಲಾದ ಶಿಕ್ಷಣ
ತಜ್ಞರ ಪ್ರಕಾರ ಡಿಜಿಟಲ್ ಕ್ರಾಂತಿಯ ಸುಧಾರಣೆಯ ಸಂಭಾವ್ಯ ಪರಿಣಾಮವನ್ನು ಐದು ವರ್ಷಗಳ ಅಲ್ಪ ಸಮಯದಲ್ಲಿ ಅಳೆಯುವುದು ಕಷ್ಟ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಡಿಜಿಟಲ್ ಶಿಕ್ಷಣದಲ್ಲಿ ಮಾಡಲಾದ ದೊಡ್ಡ ಹೂಡಿಕೆಯಿಂದ ಅನೇಕ ಶಾಲೆಗಳು ಹಿಂದಕ್ಕೆ ಸರಿಯುತ್ತಿವೆ. ಸ್ಯಾಂಟಿಯಾಗೊ ಡಿ ಕಾಂಪೊಸ್ಟೆಲಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮತ್ತು ಡಿಡಾಕ್ಟಿಕ್ಸ್ ಮತ್ತು ಡಿಜಿಟಲ್ ಶಿಕ್ಷಣದ ಸಂಶೋಧಕಿ ಇಸಾಬೆಲ್ ಡ್ಯಾನ್ಸ್ ಹೇಳುವ ಪ್ರಕಾರ, "ನಾವಿಂದು ಮಧ್ಯಂತರ ಕ್ಷಣದಲ್ಲಿದ್ದೇವೆ. ಶೈಕ್ಷಣಿಕ ಸಮಸ್ಯೆಗಳು ಸುಧಾರಣೆಯಾಗದೆ ಡಿಜಿಟಲ್ ಸಮಸ್ಯೆ ಎಂದು ಹೇಳುವುದು ಸರಿಯಲ್ಲ. ತರಗತಿಗಳಿಮದ ಸಂಪೂರ್ಣ ತಂತ್ರಜ್ಞಾನ ತೆಗೆದು ಹಾಕುವುದರಿಂದ ಸಮಸ್ಯೆ ಪರಿಹಾರವಾಗದು. ಸ್ಕ್ರೀನ್ಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವುದರಿಂದಲೂ ಸಮಸ್ಯೆ ಎದುರಾಗಬಹುದು. ಡಿಜಿಟಲ್ ಸುರಕ್ಷೆಯ ಮೂಲಕ ಸ್ಕ್ರೀನ್ ಬಳಸುವುದನ್ನು ಕಲಿಯಬೇಕು. ತಂತ್ರಜ್ಞಾನ ಎಲ್ಲೆಡೆ ಸಿಗುತ್ತದೆ. ಶಾಲೆಗಳಲ್ಲಿ ಕಲಿಸದ್ದನ್ನು ಹೊರಗೆ ಕಲಿಸಲಾಗುತ್ತದೆ. ತಂತ್ರಜ್ಞಾನ ಮುಖ್ಯ ಆದರೆ ಸಾಂಪ್ರದಾಯಿಕ ಬರವಣಿಗೆ ಮತ್ತು ಓದು ಕೂಡ ಅಷ್ಟೇ ಮುಖ್ಯ" ಎನ್ನುತ್ತಾರೆ ಡ್ಯಾನ್ಸ್.
ಇತರ ದೇಶಗಳು ಏನು ಹೇಳುತ್ತವೆ?
ಸ್ಪೇನ್ನಲ್ಲೂ ವಿದ್ಯಾರ್ಥಿಗಳು ಕಾಗದದಲ್ಲಿ ಅಧ್ಯಯನ ಮಾಡಲು ಬಯಸುತ್ತಿದ್ದಾರೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡ ವರದಿಗಳಿಲ್ಲ. ಆದರೆ, ಶಾಲೆಗಳಲ್ಲಿ ಮೊಬೈಲ್ ಸ್ಕ್ರೀನ್ ಗಳನ್ನು ಸೀಮಿತಗೊಳಿಸುವ ಪ್ರಯತ್ನ ನಡೆದಿದೆ. ನಾರ್ವೆಯಲ್ಲಿ ಡಿಜಿಟಲ್ ಕಲಿಕೆಯನ್ನು ಸಂಪೂರ್ಣವಾಗಿ ತ್ಯಜಿಸಲಾಗುತ್ತಿಲ್ಲ. ಆದರೆ ಶಾಲೆಗಳಲ್ಲಿ ಅತಿಯಾದ ಸ್ಕ್ರೀನ್ ಸಮಯ ಮತ್ತು ಡಿಜಿಟಲ್ ಸಾಧನಗಳ ಬಳಕೆಯ ಬಗ್ಗೆ ಗಮನಾರ್ಹ ವಿರೋಧ ವ್ಯಕ್ತವಾಗುತ್ತಿದೆ. ಭೌತಿಕ ಪುಸ್ತಕಗಳು, ಕೈಬರಹ ಮತ್ತು ಕಾಗದದಂತಹ ಸಾಂಪ್ರದಾಯಿಕ ಕಲಿಕಾ ವಿಧಾನಗಳತ್ತ ನಾರ್ವೆ ಮರಳುತ್ತಿದೆ. ತಂತ್ರಜ್ಞಾನದ ಆತುರದ ವ್ಯಾಪಕ ಅಳವಡಿಕೆ ಕಲಿಕಾ ಪರಿಸರವನ್ನು ದುರ್ಬಲಗೊಳಿಸಿದೆ ಮತ್ತು ಮಕ್ಕಳ ಓದುವ ಗ್ರಹಿಕೆಯನ್ನು ಕಡಿಮೆ ಮಾಡಿ ಏಕಾಗ್ರತೆ ಮೇಲೆ ಪರಿಣಾಮ ಬೀರಿದೆ ಎನ್ನುವ ಕಳವಳ ವ್ಯಕ್ತವಾಗಿದೆ.
ನೆದರ್ಲ್ಯಾಂಡ್ಸ್ ಕೂಡ ಶಾಲೆಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆಯನ್ನು ಕಳೆದ ವರ್ಷ ಜನವರಿ 1ರಿಂದ ಸಂಪೂರ್ಣವಾಗಿ ನಿಷೇಧಿಸಿದೆ. ಡಚ್ ನ್ಯೂಸ್ ಪ್ರಕಾರ ಸಚಿವ ಸಂಪುಟದ ಸದಸ್ಯರು ಶಾಲೆಗಳಲ್ಲಿ ಮೊಬೈಲ್ ಬಳಕೆ ತಡೆಹಿಡಿದಿರುವುದನ್ನು ದೃಢೀಕರಿಸಿದ್ದಾರೆ. ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಯಂತ್ರಿಸಲು ರಾಷ್ಟ್ರೀಯ ನಿಯಮಗಳನ್ನು ರಚಿಸಲಾಗಿವೆ.
ನ್ಯೂಝಿಲ್ಯಾಂಡ್ ಕೂಡ ಶಾಲೆಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆಯನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಂಡಿದೆ. ಸಂಪೂರ್ಣ ನಿಷೇಧಿಸದೆ ಇದ್ದರೂ, ಡಿಜಿಟಲ್ ಸಾಧನಗಳ ಮೇಲೆ ಅತಿಯಾದ ಅವಲಂಬನೆಯನ್ನು ತಡೆಯಲು ಪ್ರಯತ್ನಿಸಿದೆ.
ಜಪಾನ್ ನಲ್ಲಿ 2019ರಿಂದ ಶಾಲೆಗಳಲ್ಲಿ ಡಿಜಿಟಲ್ ಸಾಧನಗಳನ್ನು ಪರಿಚಯಿಸಿದೆ. ಇಂದು ಮಕ್ಕಳು ಶೇ 90ರಷ್ಟು ಶಾಲೆಗಳಲ್ಲಿ ವಾರಕ್ಕೆ ಮೂರು ಬಾರಿ ಡಿಜಿಟಲ್ ಸಾಧನಗಳನ್ನು ಬಳಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಲಿಖಿತ ಕೌಶಲ್ಯಗಳ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ ಎಂದು ಹೆತ್ತವರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದೀಗ ಶಾಲೆಗಳಲ್ಲಿ ಪೆನ್ನು, ಕಾಗದ ಮತ್ತು ಪುಸ್ತಕಗಳನ್ನು ಬಳಸುವುದು ಕಡ್ಡಾಯವಾಗಿದೆ. ಚೀನಾದಲ್ಲೂ ಮಕ್ಕಳು ಡಿಜಿಟಲ್ ಸಾಧನಗಳ ಮೂಲಕ ಕಲಿಕೆಯಲ್ಲಿ ತೊಡಗಿದ್ದಾರೆ. ಆದರೆ ಯಾವುದೇ ಕಡಿವಾಣ ಹಾಕುವ ಬಗ್ಗೆ ಚಿಂತನೆ ನಡೆದಿಲ್ಲ. ಬದಲಾಗಿ ವ್ಯಾಪಕ ಪ್ರಮಾಣದಲ್ಲಿ ಡಿಜಿಟಲ್ ಸಾಧನಗಳ ಬಳಕೆಗೆ ಪ್ರಯತ್ನಗಳು ನಡೆಯುತ್ತಿವೆ.

