ಹೈದರಾಬಾದ್: 2024ರಿಂದ 2025ರ ಅವಧಿಯಲ್ಲಿ ತೆಲಂಗಾಣ ಕಾಂಗ್ರೆಸ್ ಸರ್ಕಾರ ನಡೆಸಿದ್ದ ಜಾತಿ ಸಮೀಕ್ಷೆಯ (SEEEPC) ಒಳ ಸಂಗತಿಗಳು ಕಳೆದ ಏಪ್ರಿಲ್ 15 ರಂದು ಬಹಿರಂಗವಾಗಿವೆ.
ಈ ಪ್ರಕಾರ ತೆಲಂಗಾಣದ ಒಟ್ಟು ಜನಸಂಖ್ಯೆಯಲ್ಲಿ (3.55 ಕೋಟಿ) ಕೇವಲ ಶೇ 4.8 ರಷ್ಟಿರುವ ರೆಡ್ಡಿ ಸಮುದಾಯವೇ ಅತಿ ಹೆಚ್ಚು ಭೂ ಮಾಲೀಕತ್ವವನ್ನು ಹೊಂದಿದೆ.
ಅಂದರೆ ತೆಲಂಗಾಣದಲ್ಲಿ ಒಟ್ಟು ಲಭ್ಯ ಕೃಷಿ ಭೂಮಿ ಹಾಗೂ ಇತರೆ ಖಾಸಗಿ ಬಳಕೆ ಭೂಮಿ ಬರೋಬ್ಬರಿ ಶೇ 13.5 ರಷ್ಟು ರೆಡ್ಡಿಗಳ ಬಳಿ ಇದೆ.
ತೆಲಂಗಾಣದಲ್ಲಿ ಪ್ರತಿ ಕುಟುಂಬದ ಬಳಿ ಸರಾಸರಿ ಶೇ 0.7 ಎಕರೆ ನೀರಾವರಿ ಕೃಷಿ ಭೂಮಿ ಇದೆ ಎಂದು ವರದಿ ಹೇಳಿದೆ. ಈ ನೀರಾವರಿ ಭೂಮಿಯಲ್ಲೂ ರೆಡ್ಡಿಗಳದ್ದೇ ಪ್ರಾಬಲ್ಯ. ವೆಲಮ, ಪರಿಕರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಕುಟುಂಬಗಳ ಬಳಿಯೂ ಸರಾಸರಿ ಪ್ರಮಾಣಕ್ಕಿಂತಲೂ ನೀರಾವರಿ ಭೂಮಿ ಕಡಿಮೆ ಇದೆ.
ಭೂ ಮಾಲೀಕತ್ವದಲ್ಲಿ ರೆಡ್ಡಿಗಳನ್ನು ಹೊರತುಪಡಿಸಿದರೆ ವೆಲಮಾ ಮತ್ತು ಎಸ್‌ಟಿ ಕೋಯಾಗಳು ಅತಿ ಹೆಚ್ಚು ಪ್ರಮಾಣದ ಭೂ ಮಾಲೀಕತ್ವ ಹೊಂದಿದ್ದಾರೆ.
ತೆಲಂಗಾಣದಲ್ಲಿ ರೆಡ್ಡಿಗಳಿಗಿಂತ ಎಸ್‌ಸಿಗಳು ಮತ್ತು ಮುಸ್ಲಿಂರ ಸಂಖ್ಯೆ ಹೆಚ್ಚಿದ್ದರೂ ಭೂ ಮಾಲೀತ್ವದ ಪ್ರಮಾಣ ತುಂಬಾ ಕಡಿಮೆ ಇದೆ ಎಂದು ವರದಿ ಹೇಳುತ್ತದೆ.
ಇನ್ನೊಂದು ವಿಶೇಷ ಸಂಗತಿ ಎಂದರೆ, ತೆಲಂಗಾಣದಲ್ಲಿ ಕಡಿಮೆ ಪ್ರಮಾಣದಲ್ಲಿರುವ ಬ್ರಾಹ್ಮಣರಲ್ಲಿ ಅತಿ ಹೆಚ್ಚು ಕುಟುಂಬಗಳು ಕಾರುಗಳ ಒಡೆತನ (ಶೇ 16.4) ಹೊಂದಿವೆ.
ಹಿಂದುಳಿದ ವರ್ಗಗಳ (ಒಬಿಸಿ.) ಜನಸಂಖ್ಯೆ ಶೇ 46.25, ಮುಸ್ಲಿಂ ಶೇ 12.56, ಎಸ್‌ಸಿ ಶೇ 17.43, ಎಸ್‌ಟಿ ಶೇ 10.45, ಇತರೆ ಸಮುದಾಯಗಳು ಶೇ 15.79ರಷ್ಟು ಜನಸಂಖ್ಯೆ ಹೊಂದಿವೆ ಎಂದು ವರದಿ ಈ ಮೊದಲೇ ತಿಳಿಸಿತ್ತು, ಆದರೆ, ವಿವರಗಳು ಸಾರ್ವಜನಿಕವಾಗಿ ಲಭ್ಯವಾಗಿರಲಿಲ್ಲ.
ಇದರ ನಡುವೆಯೇ, ಸಮೀಕ್ಷೆಯ ವರದಿ ಬಿಡುಗಡೆಯಾದ ನಂತರ ತೆಲಂಗಾಣ ಸರ್ಕಾರವು ಶಿಕ್ಷಣ, ಉದ್ಯೋಗ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಶೇ 42ಕ್ಕೆ ಹೆಚ್ಚಿಸಿ ಮಸೂದೆ ಅಂಗೀಕರಿಸಿದೆ. ಅದನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದ್ದಾರೆ.
ಜಾತಿ ಸಮೀಕ್ಷೆಯ ವರದಿಯನ್ನಾಧರಿಸಿ ಮೀಸಲಾತಿಯ ಮಿತಿಯನ್ನು ಮೀರಿದ ಎರಡನೇ ರಾಜ್ಯ ತೆಲಂಗಾಣ. ಒಟ್ಟಾರೆ ಮೀಸಲಾತಿಯ ಪ್ರಮಾಣವು ಶೇ 50ರ ಮಿತಿಯನ್ನು ದಾಟಿರುವುದರಿಂದ, ಮಸೂದೆಗೆ ಕಾನೂನು ತೊಡಕು ಎದುರಾಗಿದೆ.
ರೇವಂತ್ ರೆಡ್ಡಿ ಸರ್ಕಾರವು ಜಾತಿ ಸಮೀಕ್ಷೆ ದತ್ತಾಂಶ ಮತ್ತು ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಕಾನೂನು ತಜ್ಞರ ನೆರವು ಪಡೆಯಲು ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ವರದಿಯ ಬಗ್ಗೆ ವಿರೋಧ ಪಕ್ಷಗಳು ಸೇರಿದಂತೆ ಕೆಲವು ವಲಯಗಳಿಂದ ಆಕ್ಷೇಪಣೆಗಳು ವ್ಯಕ್ತವಾಗಿವೆ.

