ಬದಿಯಡ್ಕ: ತೀವ್ರ ಶಾಖ ಮುಂದುವರಿದಂತೆ, ಅಘೋಷಿತ ವಿದ್ಯುತ್ ಕಡಿತ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ನಗರ ಹಳ್ಳಿಯೆನ್ನದೆ ಹಗಲಿನ ವಿವಿಧ ಸಮಯಗಳಲ್ಲಿ ವಿದ್ಯುತ್ ಕಡಿತವು ಜಿಲ್ಲೆಯ ಹಲವು ಭಾಗಗಳಲ್ಲಿ ಸಾಮಾನ್ಯವಾಗುತ್ತಿದೆ. 15 ನಿಮಿಷದಿಂದ ಅರ್ಧ ಘಂಟೆಯವರೆಗೆ ವಿದ್ಯುತ್ ಕಡಿತ ಉಂಟಾಗುತ್ತಿದೆ. ಯಾವುದೇ ಸೂಚನೆ ನೀಡಿದೆ ವಿದ್ಯುತ್ ಕಡಿತಗೊಳಿಸುವುದರಿಂದ ಗೃಹೋಪಯೋಗಿ ಉಪಕರಣಗಳು ಮತ್ತು ಸಣ್ಣ ವ್ಯವಹಾರಗಳಿಗೆ ಭಾರಿ ಆರ್ಥಿಕ ನಷ್ಟವಾಗುತ್ತಿದೆ ಎಂಬ ದೂರುಗಳಿವೆ.
ರೋಗಿಗಳಿಗೆ ಅಪಾಯ:
ಬಿಸಿಲಿನ ಬೇಗೆಗೆ ಫ್ಯಾನ್‍ಗಳು ಮತ್ತು ಎಸಿಗಳಂತಹ ಉಪಕರಣಗಳ ಬಳಕೆಯ ಮೇಲೆ ಇಂತಹ ಅಘೋಷಿತ ವಿದ್ಯುತ್ ಕಡಿತ ತೊಂದರೆ ನೀಡುತ್ತಿರುವ ಮಧ್ಯೆ, ವಿದ್ಯುತ್ ಅವಲಂಬಿಸಿರುವ ರೋಗಿಗಳಿಗೆ ಇದು ದೊಡ್ಡ ಅಪಾಯವನ್ನುಂಟುಮಾಡುತ್ತಿದೆ. ಕಾಂಞಂಗಾಡ್‍ನ ಕಲ್ಲುರವಿಯಲ್ಲಿ ಹಾಸಿಗೆ ಹಿಡಿದ ರೋಗಿಯೊಬ್ಬರು ಆಮ್ಲಜನಕ ಸಿಲಿಂಡರ್ ಅನ್ನು ನಿರ್ವಹಿಸಲು ಗಂಟೆಗೆ 500 ರೂ. ವೆಚ್ಚದಲ್ಲಿ ಜನರೇಟರ್ ಬಳಸಬೇಕಾದ ದುರಂತ ಪರಿಸ್ಥಿತಿಯನ್ನು ಸಂಬಂಧಿಕರೊಬ್ಬರು ಹಂಚಿಕೊಂಡರು. ಹಗಲಿನ ನಿರ್ವಹಣೆಯ ಜೊತೆಗೆ, ರಾತ್ರಿ ವೇಳೆಯೂ ಘಳಿಗೆ ಗಳಿಗೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ವಿಧಿಸಲಾಗಿರುವುದರಿಂದ ಜನರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಕೆಲವು ದಿನಗಳಲ್ಲಿ, ಮಧ್ಯರಾತ್ರಿಯಲ್ಲಿಯೂ ವಿದ್ಯುತ್ ಕಡಿತ ಸಾಮಾನ್ಯವಾಗುತ್ತಿದೆ.
ಮನೆ ಬಾಗಿಲಿನಲ್ಲಿ ಲೋಡ್ ಶೆಡ್ಡಿಂಗ್:
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಘೋಷಿಸುವ ಸಾಧ್ಯತೆಯಿದೆ ಎಂದು ವಿದ್ಯುತ್ ವಲಯದಲ್ಲಿ ತೊಡಗಿಸಿಕೊಂಡವರು ಸೂಚಿಸುತ್ತಾರೆ. ಪ್ರಸ್ತುತ ಅಘೋಷಿತ ನಿರ್ಬಂಧಗಳು ಶೀಘ್ರದಲ್ಲೇ ನಿಗದಿತ ಲೋಡ್ ಶೆಡ್ಡಿಂಗ್ ಆಗಿ ಬದಲಾಗಬಹುದು. ವಿದ್ಯುತ್ ಬೇಡಿಕೆ ದಿನಕ್ಕೆ 50 ಮೆಗಾವ್ಯಾಟ್ ಹೆಚ್ಚುತ್ತಿದೆ. ಇತರ ರಾಜ್ಯಗಳಿಂದ ಸರಬರಾಜುಗೊಳ್ಳುವ ವಿದ್ಯುತ್ ನಲ್ಲಿ ಸುಮಾರು 200 ಮೆಗಾವ್ಯಾಟ್ ವಿದ್ಯುತ್ ಕೊರತೆಯಿಂದಾಗಿ ಸರಬರಾಜಿನ ಮೇಲೂ ಪರಿಣಾಮ ಬೀರಿದೆ. ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಗ್ರಿಡ್ ಅತಿಯಾದ ಒತ್ತಡ ಅನುಭವಿಸುತ್ತಿದ್ದು, ಬಿಕ್ಕಟ್ಟನ್ನು ಹೆಚ್ಚಿಸುತ್ತಿದೆ.
ಬಳಕೆಯನ್ನು ಕಡಿಮೆ ಮಾಡಲು ಸಲಹೆ:
ಇಂಡಕ್ಷನ್ ಕುಕ್ಕರ್‍ಗಳು, ವಾಷಿಂಗ್ ಮೆಷಿನ್‍ಗಳು, ಐರನ್ ಬಾಕ್ಸ್‍ಗಳು, ಮಿಕ್ಸರ್-ಗ್ರೈಂಡರ್‍ಗಳು ಮತ್ತು ನೀರಿನ ಪಂಪ್ ಗಳಂತಹ ಹೆಚ್ಚಿನ ವಿದ್ಯುತ್ ಅಗತ್ಯವಿರುವ ಉಪಕರಣಗಳನ್ನು ಸಂಜೆ 6 ರಿಂದ ರಾತ್ರಿ 10 ರವರೆಗೆ ನಿರ್ವಹಿಸದಂತೆ ಅಧಿಕಾರಿಗಳು ಕೇಳಿಕೊಂಡಿದ್ದಾರೆ. ಅನಗತ್ಯ ದೀಪಗಳು, ಎಸಿಗಳು ಮತ್ತು ಫ್ಯಾನ್‍ಗಳನ್ನು ಆಫ್ ಮಾಡಬೇಕು. ಆಸ್ಪತ್ರೆಗಳು ಬ್ಯಾಕಪ್ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ದೀರ್ಘಾವಧಿಯ ಒಪ್ಪಂದಗಳ ಮೂಲಕ ವಿದ್ಯುತ್ ಖಚಿತಪಡಿಸಿಕೊಳ್ಳಲು ನಿಯಂತ್ರಣ ಆಯೋಗದ ಅನುಮೋದನೆಯನ್ನು ಕೋರಲಾಗಿದೆ. ಇದಕ್ಕಾಗಿ ಪುರಾವೆಗಳ ಸಂಗ್ರಹವನ್ನು ಈ ತಿಂಗಳು ಮಾಡಲಾಗುತ್ತದೆ.
ಹೈಲೈಟ್ಸ್:
- ಹೊರ ರಾಜ್ಯಗಳಿಂದ ವಿದ್ಯುತ್ ಲಭ್ಯತೆಯಲ್ಲಿ 200 ಮೆಗಾವ್ಯಾಟ್ ಕೊರತೆ ಕಂಡುಬಂದಿದೆ
- ಅಘೋಷಿತ ನಿರ್ಬಂಧಗಳು ಶೀಘ್ರದಲ್ಲೇ ಅಧಿಕೃತ ಲೋಡ್ ಶೆಡ್ಡಿಂಗ್ ಆಗಿ ಬದಲಾಗುವ ಸಾಧ್ಯತೆ
- ಕಾಞಂಗಾಡ್‍ನ ಕಲ್ಲುರವಿಯಲ್ಲಿ ಹಾಸಿಗೆ ಹಿಡಿದ ರೋಗಿಗೆ ಜನರೇಟರ್ ಬಳಸಬೇಕಾದ ದುರಂತ ಪರಿಸ್ಥಿತಿ
- ಸಂಜೆ 6 ರಿಂದ ರಾತ್ರಿ 10 ರವರೆಗೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಕೆಎಸ್‍ಇಬಿ ಸೂಚನೆ


.webp)
