ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್‌ಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ಬುಧವಾರ ಹೊಸ ನೋಟಿಸ್ ಜಾರಿ ಮಾಡಿದೆ.
ಏಪ್ರಿಲ್ 1ರಂದು ನೀಡಲಾಗಿದ್ದ ನೋಟಿಸ್ ಕೇಜ್ರಿವಾಲ್ ಅವರಿಗೆ ತಲುಪಿಲ್ಲ ಎಂಬ ರಿಜಿಸ್ಟ್ರಿಯ ವರದಿಯನ್ನು ಗಮನಿಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು, 'ಪ್ರತಿವಾದಿಗೆ ನೋಟಿಸ್ ತಲುಪದ ಕಾರಣ, ಮತ್ತೊಮ್ಮೆ ಹೊಸದಾಗಿ ನೋಟಿಸ್ ಜಾರಿ ಮಾಡಲಾಗುವುದು' ಎಂದು ತಿಳಿಸಿದರು.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನಿಗದಿಪಡಿಸಲಾಗಿದೆ.
ಅಬಕಾರಿ ನೀತಿ ಹಗರಣದ ತನಿಖೆಗೆ ಹಾಜರಾಗುವಂತೆ ಪದೇ ಪದೇ ಸಮನ್ಸ್ ನೀಡಿದರೂ ಅಂದಿನ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಗೈರಾಗಿದ್ದರು. ತನಿಖೆಗೆ ಅಡ್ಡಿಪಡಿಸಲು ಕ್ಷುಲ್ಲಕ ಕಾರಣಗಳನ್ನು ನೀಡಿದ್ದರು ಎಂದು ಇ.ಡಿ ದೂರು ದಾಖಲಿಸಿತ್ತು.
ಜನವರಿ 22ರಂದು ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಇಮೇಲ್ ಮೂಲಕ ಸಮನ್ಸ್ ಕಳುಹಿಸಿರುವುದನ್ನು ಸಾಬೀತುಪಡಿಸಲು ಇ.ಡಿ ವಿಫಲವಾಗಿದೆ. ಈ ಪ್ರಕ್ರಿಯೆಯು ಪಿಎಂಎಲ್‌ಎ ಕಾಯ್ದೆಯ ಅಡಿಯಲ್ಲಿ ಕಾನೂನುಬದ್ಧವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಮತ್ತು ಡೊನಾಲ್ಡ್ ಟ್ರಂಪ್ ಸೋದರ ಸಂಬಂಧಿಗಳೇ?ಯಶ್ ಅಭಿಮಾನಿಗಳಿಗೆ ನಿರಾಸೆ: ಜೂನ್ 4ಕ್ಕೂ ಬಿಡುಗಡೆಯಾಗುತ್ತಿಲ್ಲ 'ಟಾಕ್ಸಿಕ್'
ಸಮನ್ಸ್ ಸ್ವೀಕರಿಸಿದರೂ ಕೇಜ್ರಿವಾಲ್ ಹಾಜರಾಗದಿರುವುದು ಸ್ಪಷ್ಟವಾಗಿದ್ದರೂ, ವಿಚಾರಣಾ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿರುವುದು ದೊಡ್ಡ ತಪ್ಪು ಎಂದು ಇ.ಡಿ ಹೈಕೋರ್ಟ್‌ನಲ್ಲಿ ವಾದಿಸಿದೆ.
ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಫೆಬ್ರವರಿ 27ರಂದು ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಇತರರನ್ನು ವಿಚಾರಣಾ ನ್ಯಾಯಾಲಯ ಬಿಡುಗಡೆ ಮಾಡಿತ್ತು. ಈ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿರುವ ಮೇಲ್ಮನವಿಯೂ ಹೈಕೋರ್ಟ್‌ನಲ್ಲಿ ಬಾಕಿ ಇದೆ.

