ಟೆಹರಾನ್: ಹೊರ್ಮುಜ್ ಜಲಸಂಧಿ ನಿರ್ವಹಣೆ ಹೊಸ ಹಂತವನ್ನು ಪ್ರವೇಶಿಸಲಿದೆ ಎಂದು ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಗುರುವಾರ (ಏ.9) ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಮಾತನಾಡಿದ ಅವರು, 'ನಾವು ಯುದ್ಧವನ್ನು ಬಯಸುತ್ತಿಲ್ಲ. ಅದರ ಅಗತ್ಯವೂ ಇಲ್ಲ.
ಆದರೆ, ಯಾವುದೇ ಕಾರಣಕ್ಕೂ ನಾವು ನಮ್ಮ ಕಾನೂನುಬದ್ಧ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ. ಆ ನಿಟ್ಟಿನಲ್ಲಿ ಸಂಪೂರ್ಣ ಪ್ರತಿರೋಧ ವ್ಯಕ್ತಪಡಿಸುತ್ತೇವೆ' ಎಂದಿದ್ದಾರೆ.
ಫೆ.28ರಂದು ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಅಲ್ಲದೆ ಇರಾನ್ನ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡಿದ್ದ ಅಮೆರಿಕ ಪಡೆ ನಡೆಸಿದ್ದ ದಾಳಿಗಳಲ್ಲಿ ಸರ್ವೊಚ್ಚ ನಾಯಕ ಆಯತುಲ್ಲಾ ಆಲಿ ಖಮೇನಿ, ಐಆರ್ಜಿಸಿ ಕಮಾಂಡರ್ಗಳು, ರಾಜಕಾರಣಿಗಳು ಹಾಗೂ ಸೈನ್ಯದ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖ ನಾಯಕರು ಹತ್ಯೆಯಾಗಿದ್ದರು.
ಆ ಬಳಿಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ನೂತನ ಪರಮೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. 57 ವರ್ಷದ ಮೊಜ್ತಾಬಾ ಖಮೇನಿ ಅವರನ್ನು 88 ಸದಸ್ಯರ ತಜ್ಞರ ಮಂಡಳಿ ಆಯ್ಕೆ ಮಾಡಿತ್ತು. ಸದ್ಯ ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಅಮೆರಿಕ ಹಾಗೂ ಇರಾನ್ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಏಪ್ರಿಲ್ 10 ರಂದು ಶುಕ್ರವಾರ ಇಸ್ಲಾಮಾಬಾದ್ನಲ್ಲಿ ಮಾತುಕತೆ ನಡೆಯಲಿದೆ ಎಂದೂ ಅದು ದೃಢಪಡಿಸಿದೆ. ಕದನ ವಿರಾಮ ಕೋರಿ ಇರಾನ್ಗೆ ಅಮೆರಿಕ 15 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು. ಮಾತುಕತೆಗೆ ಆಧಾರವಾಗಿ ಇರಾನ್ ಕಳುಹಿಸಿದ ಪರಿಷ್ಕೃತ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿದೆ.

