ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾತ್ಕಾಲಿಕ ಕದನ ವಿರಾಮ ಕುರಿತು ಬುಧವಾರ ಘೋಷಣೆ ಮಾಡಿದ್ದರು. ಅದರ ಬೆನ್ನಲ್ಲೇ, ತನ್ನ ಷರತ್ತುಗಳಿಗೆ ಒಳಪಟ್ಟು ಕದನ ವಿರಾಮಕ್ಕೆ ಸಮ್ಮತಿಸುವುದಾಗಿ ಇರಾನ್ ಸಹ ಘೋಷಿಸಿತ್ತು. ಆದರೆ, ತಾನು ಲೆಬನಾನ್ ಮೇಲೆ ನಡೆಸುತ್ತಿರುವ ದಾಳಿಗಳು ಕದನ ವಿರಾಮ ಒಪ್ಪಂದದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಇಸ್ರೇಲ್ ಬುಧವಾರವೇ ಘೋಷಿಸಿತ್ತು.
ಲೆಬನಾನ್ ರಾಜಧಾನಿ ಬೈರೂತ್ ಹಾಗೂ ಬಂಡುಕೋರರ ಸಂಘಟನೆ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ದಾಳಿಯನ್ನು ಮುಂದುವರಿಸಿದೆ.
ಕದನ ವಿರಾಮ ಒಪ್ಪಂದದಂತೆ ನಡೆದುಕೊಳ್ಳದಿದ್ದಲ್ಲಿ ಈ ಮೊದಲಿನ ಕ್ಕಿಂತಲೂ ಭೀಕರವಾಗಿ ದಾಳಿ ನಡೆಸುವುದಾಗಿ ಇರಾನ್‌ಗೆ ಟ್ರಂಪ್ ಎಚ್ಚರಿಸಿದ್ದಾರೆ.
ಈ ಎಲ್ಲ ವಿದ್ಯಮಾನಗಳು ಕದನ ವಿರಾಮ ಒಪ್ಪಂದಕ್ಕೆ ಸ್ಪಷ್ಟ ರೂಪ ನೀಡಿ, ಅದನ್ನು ಜಾರಿಗೊಳಿಸುವ ಕುರಿತಂತೆ ಅನಿಶ್ಚಿತತೆ ಹಾಗೂ ಸಂಶಯ ಮೂಡುವಂತೆ ಮಾಡಿವೆ.
ಉತ್ತರ ಸಿಗದ ಪ್ರಶ್ನೆಗಳು: ಕದನ ವಿರಾಮ ಒಪ್ಪಂದ ಕುರಿತಂತೆ ಇನ್ನೂ ಸಹಮತ ಮೂಡಿಲ್ಲ. ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿರುವ ವಿಚಾರವು ಒಪ್ಪಂದದ ಭಾಗವಾಗಿದೆಯೇ ಇಲ್ಲವೇ ಎಂಬುದಕ್ಕಿಂತ ಇತರ ಹಲವು ಸಂಗತಿಗಳು ಕದನ ವಿರಾಮ ಕುರಿತಂತೆ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನ್ ಬಳಿ ಇರುವ ಸಮೃದ್ಧೀಕರಿಸಿದಯುರೇನಿಯಂ ದಾಸ್ತಾನು ಕುರಿತು ಏನು ನಿರ್ಣಯ ತೆಗೆದುಕೊಳ್ಳಲಾಗುತ್ತದೆ?ಹೊರ್ಮುಜ್ ಜಲಸಂಧಿ ಮೂಲಕ ಹಡಗುಗಳ ಸಂಚಾರವು ಸಹಜ ಸ್ಥಿತಿಗೆ ಮರಳುವುದು ಯಾವಾಗ ಮತ್ತು ಹೇಗೆ? ಭವಿಷ್ಯದಲ್ಲಿ ಕ್ಷಿಪಣಿ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯ ತಗ್ಗುವುದೇ ಎಂಬ ಪ್ರಶ್ನೆಗಳು ಮೂಡಿವೆ.
'ಅಣ್ವಸ್ತ್ರ ತಯಾರಿಕೆಗೆ ಅಗತ್ಯವಿರುವ ಗುಣಮಟ್ಟದ ಯುರೇನಿಯಂ ಹೊಂದುವುದು ಇರಾನ್‌ನ ಹಕ್ಕು. ಅಮೆರಿಕದೊಂದಿಗೆ ನಡೆಯಲಿರುವ ಶಾಂತಿ ಮಾತುಕತೆ ವೇಳೆ ಈ ಕುರಿತು ಪ್ರಸ್ತಾಪಿಸಲಾಗುವುದು' ಎಂದು ಇರಾನ್‌ನ ಅಣು ಶಕ್ತಿ ಸಂಘಟನೆ (ಎಇಒಐ) ಮುಖ್ಯಸ್ಥ ಮೊಹಮ್ಮದ್ ಇಸ್ಲಾಮಿ ಹೇಳಿದ್ದಾರೆ.
ಯುರೇನಿಯಂ ಸಮೃದ್ಧೀಕರಿಸುವ ಕುರಿತ ಇರಾನ್‌ನ ವಾದ ಒಪ್ಪುವುದಿಲ್ಲ ಎಂದು ಅಮೆರಿಕ ಹೇಳಿದೆ. ಹೀಗಾಗಿ ತಾತ್ಕಾಲಿಕ ಕದನ ವಿರಾಮ ಕುರಿತಂತೆ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ (ಏಪ್ರಿಲ್ 10) ನಡೆಯಲಿರುವ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.
ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿಇಸ್ರೇಲ್‌ನ ಉತ್ತರ ಭಾಗದ ನಿವಾಸಿಗಳಿಗೆ ಭದ್ರತೆ ಮರುಸ್ಥಾಪಿಸುವವರೆಗೂ ಹಿಜ್ಬುಲ್ಲಾ ಬಂಡುಕೋರರ ಮೇಲೆ ದಾಳಿ ಮುಂದುವರಿಯುವುದು ಸಯೀದ್ ಖತೀಬ್‌ಜಾದೆ, ಉಪ ವಿದೇಶಾಂಗ ಸಚಿವ,ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ತನ್ನ ಆಕ್ರಮಣ ನಿಲ್ಲಿಸಿದಲ್ಲಿ ಹಾಗೂ ಲೆಬನಾನ್ ಮೇಲಿನ ದಾಳಿಯನ್ನು ಇಸ್ರೇಲ್ ಸ್ಥಗಿತಗೊಳಿಸಿದ ಬಳಿಕ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಹೊರ್ಮುಜ್ ಜಲಸಂಧಿ ಮೂಲಕ ಹಡಗುಗಳು ಸಾಗಲು ಅನುಮತಿ ನೀಡಲಾಗುವುದು ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷಉದ್ದೇಶಿತ ಕದನ ವಿರಾಮ ಒಪ್ಪಂದ ಏರ್ಪಡುವವರೆಗೆ ಇರಾನ್ ಸುತ್ತಲೂ ಅಮೆರಿಕದ ಯುದ್ಧನೌಕೆಗಳು ಹಾಗೂ ಯೋಧರ ನಿಯೋಜನೆ ಮುಂದುವರಿಯಲಿದೆ ಸೌಫನ್ ಸೆಂಟರ್, ನ್ಯೂಯಾರ್ಕ್, ಜಾಗತಿಕ ವಿದ್ಯಮಾನಗಳ ಕುರಿತು ವಿಶ್ಲೇಷಣೆ ಮಾಡುವ ಸಂಸ್ಥೆಇರಾನ್ ಲೆಬನಾನ್ ವಿಚಾರವನ್ನು ಕದನ ವಿರಾಮ ಒಪ್ಪಂದದಿಂದ ಹೊರಗೆ ಇಟ್ಟರೂ ಲೆಬನಾನ್ ಮೇಲಿನ ಇಸ್ರೇಲ್ ದಾಳಿ ತೀವ್ರವಾಗಲಿದೆ. ಇರಾನ್ ಮತ್ತು ಅದರ ಪರವಾಗಿ ಕಾರ್ಯನಿರ್ವಹಿಸುವ ಸಂಘಟನೆಗಳ ನಡುವೆ ಒಡಕು ಮೂಡಿಸುವ ಉದ್ದೇಶದಿಂದ ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿರಬಹುದು ಹಾಗೂ ತನ್ನನ್ನು ಹೊರಗಿಟ್ಟು ಕದನ ವಿರಾಮ ಒಪ್ಪಂದ ಕುರಿತ ಮಾತುಕತೆ ನಡೆಸುತ್ತಿರುವುದಕ್ಕೆ ಅಸಮಾಧಾನಗೊಂಡು ಇಂಥ ದಾಳಿಗಳ ಮೂಲಕ ಅದು ಪ್ರತಿಕ್ರಿಯಿಸುತ್ತಿರಬಹುದು ಎಂದು ಅರ್ಥೈಸಲಾಗುತ್ತದೆ
ಪಾಕ್‌ಗೆ ವ್ಯಾನ್ಸ್ ನೇತೃತ್ವದ ನಿಯೋಗ
ತಾತ್ಕಾಲಿಕ ಕದನ ವಿರಾಮ ಒಪ್ಪಂದ ಕುರಿತು ಚರ್ಚಿಸಲು ಏಪ್ರಿಲ್ 10ರಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವ ಅಮೆರಿಕ ನಿಯೋಗದ ನೇತೃತ್ವವನ್ನು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ವಹಿಸುವರು ಎಂದು ಶ್ವೇತಭವನ ತಿಳಿಸಿದೆ.
ಲೆಬನಾನ್: 203 ಮಂದಿ ಸಾವು
ಬೈರೂತ್ : ಬೈರೂತ್ ಸೇರಿದಂತೆ ಲೆಬನಾನ್‌ನ ಹಲವು ಪ್ರದೇಶಗಳ ಮೇಲೆ ಇಸ್ರೇಲ್ ಬುಧವಾರ ನಡೆಸಿದ ದಾಳಿಯಲ್ಲಿ 203 ಜನ ಮೃತಪಟ್ಟಿದ್ದಾರೆ ಮತ್ತು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಮಧ್ಯಾಹ್ನ ಜನದಟ್ಟಣೆ ಇರುವ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದರಿಂದ ಅಪಾರ ಸಾವು-ನೋವು ಸಂಭವಿಸಿದೆ.
ಐದು ವಾರಗಳಿಂದ ನಿರಂತರವಾಗಿ ನಡೆಯುತ್ತಿರುವ ಇಸ್ರೇಲ್ ಮತ್ತು ಲೆಬನಾನ್ ಬಂಡುಕೋರ ಸಂಘಟನೆ ಹಿಜ್ಬುಲ್ಲಾ ನಡುವಿನ ಸಂಘರ್ಷದಲ್ಲಿ ಒಂದೇ ದಿನದಲ್ಲಿ ಅಪಾರ ಸಾವು ನೋವು ಸಂಭವಿಸಿರುವುದು ಇದೇ ಮೊದಲು.
ಹಿಜ್ಬುಲ್ಲಾ ನಾಯಕ ನೈಮ್ ಕಸೆಮ್ ಆಪ್ತ ಅಲಿ ಯೂಸುಫ್ ಹಾರ್ಷಿಯನ್ನು ಹತ್ಯೆ ಮಾಡಿದ್ದಾಗಿ ಇಸ್ರೇಲ್ ಗುರುವಾರ ಹೇಳಿದೆ. ಹಿಜ್ಬುಲ್ಲಾ ಸಂಘಟನೆ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್ ದಾಳಿಯು ಅಮಾನವೀಯ ಎಂದು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಖಂಡಿಸಿದ್ದಾರೆ.

