HEALTH TIPS

ನ್ಯಾಯಾಂಗದ ಅಧಿಕಾರಿಗಳನ್ನು ಕೂಡಿಹಾಕಿದ ಪ್ರಕರಣ: ಆಡಳಿತದ ನಿಷ್ಕ್ರಿಯತೆಗೆ ಪೀಠ ಗರಂ

ನವದೆಹಲಿ/ ಕೋಲ್ಕತ್ತ: ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ತೊಡಗಿದ್ದ ನ್ಯಾಯಾಂಗದ ಏಳು ಅಧಿಕಾರಿಗಳನ್ನು ಕೂಡಿಹಾಕಿದ ಘಟನೆಗೆ ಸಂಬಂಧಿಸಿದಂತೆ ನಿಷ್ಕ್ರಿಯತೆ ತೋರಿದ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

'ಈ ಘಟನೆಯು ರಾಜ್ಯದ ಆಡಳಿತದ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸಿದೆ' ಎಂದು ಹೇಳಿರುವ ಪೀಠ, ಪಶ್ಚಿಮ ಬಂಗಾಳವು 'ಅತಿಹೆಚ್ಚು ಧ್ರುವೀಕರಣಗೊಂಡಿರುವ ರಾಜ್ಯ' ಎಂದು ಚಾಟಿ ಬೀಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿಪುಲ್‌ ಎಂ.ಪಂಚೋಲಿ ಅವರ ಪೀಠ, ಘಟನೆ ಬಗ್ಗೆ ಸಿಬಿಐ ಅಥವಾ ಎನ್‌ಐಎಯಿಂದ ಸ್ವತಂತ್ರ ತನಿಖೆಗೆ ಆದೇಶಿಸಿದೆ.

ಎಸ್‌ಐಆರ್‌ ಪ್ರಕ್ರಿಯೆ ಭಾಗವಾಗಿ ನ್ಯಾಯಾಂಗದ ಅಧಿಕಾರಿಗಳು ಮತದಾರರ ಆಕ್ಷೇಪಣೆಗಳನ್ನು ವಿಲೇವಾರಿ ಮಾಡುವ ಸ್ಥಳಗಳಲ್ಲಿ ಭದ್ರತೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನ ಸುಮಾರು 700 ನ್ಯಾಯಾಂಗ ಅಧಿಕಾರಿಗಳನ್ನು ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಗೆ ನಿಯೋಜಿಸಲಾಗಿದೆ. ಮತದಾರರ ಪಟ್ಟಿಯಿಂದ ಹೊರಗುಳಿದ 60 ಲಕ್ಷಕ್ಕೂ ಹೆಚ್ಚು ಮಂದಿಯ ಆಕ್ಷೇಪಣೆಗಳ ವಿಲೇವಾರಿ ಕೆಲಸದಲ್ಲಿ ಇವರು ನಿರತರಾಗಿದ್ದಾರೆ.

'ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಂದ ನಿರ್ದೇಶನ ಬಂದ ಬಳಿಕವೂ ಪ್ರತಿಭಟನಕಾರರ ವಿರುದ್ಧ ಕ್ರಮ ಕೈಗೊಳ್ಳದಿರುವುದರ ಹಿಂದಿನ ಕಾರಣ ವಿವರಿಸಬೇಕು' ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮಾಲ್ಡಾ ಜಿಲ್ಲೆಯ ಎಸ್‌ಎಸ್‌ಪಿಗೆ ಪೀಠ ನಿರ್ದೇಶಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿ ಸೇರಿದಂತೆ ಏಪ್ರಿಲ್ 6ರಂದು ಪೀಠವು ಇತರ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಾಗ ಈ ಎಲ್ಲಾ ಹಿರಿಯ ಅಧಿಕಾರಿಗಳು ವರ್ಚುವಲ್‌ ಆಗಿ ಹಾಜರಿರುವಂತೆಯೂ ಸಿಜೆಐ ನಿರ್ದೇಶಿಸಿದರು.

'ನ್ಯಾಯಾಂಗ ಅಧಿಕಾರಿಗಳಲ್ಲಿ ಭಯ ಉಂಟುಮಾಡಲು ನಾವು ಯಾರಿಗೂ ಬಿಡುವುದಿಲ್ಲ. ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಡಿಜಿಪಿ ಮತ್ತು ಎಸ್‌ಪಿ ವರ್ತಿಸಿದ ರೀತಿ ಅತ್ಯಂತ ವಿಷಾದಕರ. ಘಟನೆ ಬಗ್ಗೆ ಮಾಹಿತಿ ನೀಡಿದ ಬಳಿಕವೂ ಅವರು ಯಾವುದೇ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳಲು ಏಕೆ ವಿಫಲರಾದರು ಎಂಬುದನ್ನು ವಿವರಿಸಬೇಕು' ಎಂದು ಪೀಠ ಹೇಳಿದೆ.

'ಮಧ್ಯಾಹ್ನ 3.30ರ ಸುಮಾರಿಗೆ ಘೇರಾವ್‌ ಆರಂಭವಾಗಿದೆ. ಕಲ್ಕತ್ತಾ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು ತಕ್ಷಣ ಸರ್ಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ 8.30ರವರೆಗೂ ಯಾವುದೇ ಕ್ರಮ ಜರುಗಿಸದ ಕಾರಣ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಯನ್ನು ಸಂಪರ್ಕಿಸಿದ್ದಾರೆ. ಅವರು ತಕ್ಷಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ' ಎಂದು ಬುಧವಾರ ನಡೆದ ಘಟನಾವಳಿಯನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

'ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕಾಯಿತು. ಅವರು ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಗೆ ಕರೆ ಮಾಡಿ ಮಾತನಾಡಿದ್ದಾರೆ. ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಅವರು ಮುಖ್ಯ ನ್ಯಾಯಮೂರ್ತಿಯವರ ನಿವಾಸಕ್ಕೆ ಬಂದಿದ್ದಾರೆ. ಮಧ್ಯರಾತ್ರಿ ಬಳಿಕ ಅಧಿಕಾರಿಗಳನ್ನು ರಕ್ಷಿಸಲಾಯಿತು. ಆ ಬಳಿಕ ಮನೆಗೆ ಮರಳುವಾಗ ಅಧಿಕಾರಿಗಳಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ' ಎಂದು ಸಿಜೆಐ ಹೇಳಿದ್ದಾರೆ.

ಗೌರವ್‌ ಭಾಟಿಯಾ ಬಿಜೆಪಿ ರಾಷ್ಟ್ರೀಯ ವಕ್ತಾರಈ ಘಟನೆ ದೇಶದ ಇತಿಹಾಸದಲ್ಲಿ 'ಕಪ್ಪು ಚುಕ್ಕೆ'. ಮುಖ್ಯಮಂತ್ರಿ ಮಮತಾ ಆದೇಶದ ಮೇರೆಗೆ 'ಟಿಎಂಸಿಯ ಗೂಂಡಾಗಳು' ಎಸ್‌ಐಆರ್‌ ಪ್ರಕ್ರಿಯೆಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ.

ಪೀಠ ಹೇಳಿದ್ದು... * ಇದು ಸಾಮಾನ್ಯ ಪ್ರತಿಭಟನೆಯಲ್ಲ. ಈ ಘಟನೆಯು ನ್ಯಾಯಾಂಗದ ಅಧಿಕಾರಿಗಳ ನೈತಿಕತೆಯನ್ನು ಕುಗ್ಗಿಸಲು ಮತ್ತು ಎಸ್‌ಐಆರ್‌ ಪ್ರಕ್ರಿಯೆಗೆ ಅಡ್ಡಿಪಡಿಸಲು ನಡೆಸಿರುವ 'ಪೂರ್ವಯೋಜಿತ' ಕೃತ್ಯ * ನ್ಯಾಯಾಂಗದ ಅಧಿಕಾರಿಗಳನ್ನು ದೂಷಿಸಲು ಮಾತ್ರವಲ್ಲದೆ ಈ ನ್ಯಾಯಾಲಯದ ಅಧಿಕಾರವನ್ನು ಪ್ರಶ್ನಿಸುವ ಲಜ್ಜೆಗೆಟ್ಟ ಪ್ರಯತ್ನ ಇದು * ಘಟನೆ ಬಗ್ಗೆ ತನಿಖೆ ನಡೆಸಲಿರುವ ಸಂಸ್ಥೆಯು ಪ್ರಾಥಮಿಕ ವರದಿಯನ್ನು ಈ ನ್ಯಾಯಾಲಯಕ್ಕೆ ನೇರವಾಗಿ ಸಲ್ಲಿಸಬೇಕು

ಮಾಲ್ಡಾದಲ್ಲಿ ನಡೆದಿದ್ದೇನು? ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್‌ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲು ನಿಯೋಜಿಸಿದ್ದ ನ್ಯಾಯಾಂಗದ ಏಳು ಅಧಿಕಾರಿಗಳನ್ನು ಮತದಾರರು ಬುಧವಾರ ಒಂಬತ್ತು ಗಂಟೆ ಕೂಡಿಹಾಕಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ಅಳಿಸಿದ್ದನ್ನು ಪ್ರಶ್ನಿಸಿದ ಕೆಲವು ಮಂದಿ ಕಲಿಯಾಚೌಕ್-2 ತಾಲ್ಲೂಕು ಕಚೇರಿ ಬಳಿ ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ಪ್ರತಿಭಟನೆ ನಡೆಸಿದ್ದಾರೆ. 'ಪ್ರತಿಭಟನಕಾರರು ಆರಂಭದಲ್ಲಿ ನ್ಯಾಯಾಂಗ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಬಯಸಿದ್ದರು. ಆದರೆ ಅದಕ್ಕೆ ಅವಕಾಶ ನಿರಾಕರಿಸಲಾಯಿತು. ಇದರಿಂದ ಅವರು ಕಚೇರಿಯ ಆವರಣ ಘೇರಾವ್ ಮಾಡಿದ್ದಾರೆ. ಈ ಸಮಯದಲ್ಲಿ ಕಚೇರಿಯೊಳಗೆ ಸಿಲುಕಿಕೊಂಡವರಲ್ಲಿ ಮೂವರು ಮಹಿಳಾ ಅಧಿಕಾರಿಗಳೂ ಮತ್ತು ಐದು ವರ್ಷದ ಒಂದು ಮಗು ಕೂಡಾ ಇತ್ತು' ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅರೆ ಸೇನಾಪಡೆಯ ಸಿಬ್ಬಂದಿ ತಡರಾತ್ರಿ ಎಲ್ಲ ಅಧಿಕಾರಿಗಳನ್ನು ರಕ್ಷಿಸಿ ಕಚೇರಿಯಿಂದ ಹೊರಗೆ ಕರೆತಂದಿದ್ದಾರೆ.

ರಕ್ಷಣೆ ನೀಡಲು ಇ.ಸಿ ವಿಫಲ: ಮಮತಾ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತೊಡಗಿರುವ ನ್ಯಾಯಾಂಗದ ಅಧಿಕಾರಿಗಳಿಗೆ 'ರಕ್ಷಣೆ ನೀಡಲು' ಕೇಂದ್ರ ಚುನಾವಣಾ ಆಯೋಗ (ಇ.ಸಿ) ವಿಫಲವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. 'ನ್ಯಾಯಾಂಗದ ಅಧಿಕಾರಿಗಳನ್ನು ರಕ್ಷಿಸಲು ವಿಫಲವಾಗಿರುವುದಕ್ಕೆ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಖಂಡಿಸುತ್ತೇನೆ' ಎಂದು ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಅವರು ಹೇಳಿದ್ದಾರೆ. ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಚುನಾವಣಾ ಆಯೋಗವು ನಾಗರಿಕ ಮತ್ತು ಪೊಲೀಸ್ ಆಡಳಿತದಲ್ಲಿ ತನ್ನದೇ ಆದ ಅಧಿಕಾರಿಗಳನ್ನು ನಿಯೋಜಿಸಿದೆ ಎಂದ ಅವರು 'ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಆಯೋಗವು ಸಂಪೂರ್ಣ ವಿಫಲವಾಗಿದೆ' ಎಂದು ದೂರಿದ್ದಾರೆ.

'ರಾತ್ರಿ 2ರವರೆಗೂ ಗಮನಿಸುತ್ತಿದ್ದೆ' ವಿಚಾರಣೆ ವೇಳೆ ಪಶ್ಚಿಮ ಬಂಗಾಳದ ಅಡ್ವೊಕೇಟ್ ಜನರಲ್ ಅವರು 'ಈ ವಿಷಯದಲ್ಲಿ ಚುನಾವಣಾ ಆಯೋಗವು ವೈರಿಯಂತೆ ವರ್ತಿಸಬಾರದು' ಎಂದು ವಾದಿಸಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಜೆಐ 'ದುರದೃಷ್ಟವಶಾತ್ ನಿಮ್ಮ ರಾಜ್ಯದಲ್ಲಿ ಪ್ರತಿಯೊಬ್ಬರೂ ರಾಜಕೀಯ ಭಾಷೆಯಲ್ಲಿ ಮಾತನಾಡುತ್ತಾರೆ. ದುಷ್ಕೃತ್ಯದಲ್ಲಿ ಭಾಗಿಯಾದವರು ಯಾರೆಂಬುದು ನಮಗೆ ತಿಳಿದಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ಬೆಳಗಿನ ಜಾವ 2ರವರೆಗೂ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದೆ. ಇದು ತೀರಾ ದುರದೃಷ್ಟಕರ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries