ನವದೆಹಲಿ: 'ವಿಕಸಿತ ಭಾರತ' ಗುರಿಯನ್ನು ಸಾಧಿಸಲು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾಗರಿಕ ಸೇವೆಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಏ.2) ಒತ್ತಿ ಹೇಳಿದರು.
ಸಾಧನಾ ಸಪ್ತಾಹ ಉದ್ಘಾಟನೆಯ ಸಂದರ್ಭದಲ್ಲಿ ಮಾತಾಡಿದ ಮೋದಿ ಅವರು, 'ದೇಶದ ಆಡಳಿತವು ನಾಗರಿಕರ ಜೀವನ ಸುಗಮಗೊಳಿಸಬೇಕು ಮತ್ತು ಜೀವನದ ಗುಣಮಟ್ಟವನ್ನು ಪ್ರತಿದಿನವೂ ಸುಧಾರಿಸಬೇಕು.
ದೇಶದಲ್ಲಿ ಆಡಳಿತದ ತತ್ವವು 'ನಾಗರಿಕ ದೇವೋ ಭವ' ಎಂಬ ಮಂತ್ರವನ್ನು ಆಧರಿಸಿದೆ' ಎಂದು ಹೇಳಿದರು.
'ಸಾಮೂಹಿಕ ಮನೋಭಾವದಿಂದ ಈ ಮಂತ್ರವು ಸಾರ್ವಜನಿಕ ಸೇವೆಗಳನ್ನು ಹೆಚ್ಚು ಸಮರ್ಥ ಮತ್ತು ನಾಗರಿಕರ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಗುರಿಯನ್ನು ಹೊಂದಿದೆ. ನಾವು ಮಾಡುತ್ತಿರುವ ಕೆಲಸವು ದೇಶದ ಅಭಿವೃದ್ಧಿಯ ಪ್ರಯಾಣದ ಮೇಲೆ ಯಾವ ಪರಿಣಾಮ ಬೀರುತ್ತದೆ? ನಮ್ಮ ಒಂದು ನಿರ್ಧಾರದಿಂದ ಎಷ್ಟು ನಾಗರಿಕರ ಜೀವನವನ್ನು ಬದಲಾಯಿಸಬಹುದು? ನಮ್ಮ ವೈಯಕ್ತಿಕ ಪರಿವರ್ತನೆಯು ಸಾಂಸ್ಥಿಕ ಪರಿವರ್ತನೆಯಾಗುವುದು ಹೇಗೆ? ಈ ಪ್ರಶ್ನೆಯು ನಮ್ಮ ಪ್ರತಿಯೊಂದು ಪ್ರಯತ್ನದ ಭಾಗವಾಗಿರಬೇಕು. ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಸರಿಯಾಗಿ ಬಳಸುವುದು ಸಾರ್ವಜನಿಕ ಸೇವೆಯ ಅತ್ಯಗತ್ಯ ಭಾಗವಾಗಿದೆ' ಎಂದರು.
ಮುಂದುವರೆದು ಮಾತನಾಡಿದ ಮೋದಿ, ತಂತ್ರಜ್ಞಾನ ಮತ್ತು ಅಂಕಿ-ಅಂಶಗಳನ್ನು ಅರ್ಥಮಾಡಿಕೊಂಡರೆ ಮಾತ್ರ ನೀವು ಉತ್ತಮ ಆಡಳಿತಗಾರ, ಉತ್ತಮ ಸಾರ್ವಜನಿಕ ಸೇವಕರಾಗುತ್ತೀರಿ. ಇದು ನೀವು ಹೇಗೆ ನಿರ್ಧಾರ ತೆಗೆದುಕೊಳ್ಳುವಿರಿ ಎಂಬುದನ್ನು ಅವಲಂಬಿಸಿರುತ್ತದೆ. ಆದ್ದರಿಂದ ಎಐ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ನಿರಂತರ ಕಲಿಕೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ' ಎಂದು ಅವರು ಹೇಳಿದರು.

