ಕೋಲ್ಕತಾ: ತಾಕತ್ತಿದ್ದರೆ ನನ್ನನ್ನು ನೇರವಾಗಿ ಎದುರಿಸಿ, ಆದಾಯ ತೆರಿಗೆ ಇಲಾಖೆ ದಾಳಿ ಮೂಲಕ ಭಯ ಹುಟ್ಟಿರುವ ಪ್ರಯತ್ನ ಮಾಡಬೇಡಿ ಎಂದು ಬಿಜೆಪಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಶನಿವಾರ ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವೆ ಟಿಎಂಸಿ ಅಭ್ಯರ್ಥಿ ನಿವಾಸ ಸೇರಿದಂತೆ ಕೋಲ್ಕತ್ತದ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಶ್ ಬೆಹಾರಿ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ದೇಬಾಶಿಶ್ ಕುಮಾರ್ ಮತ್ತು ಭವಾನಿಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಹೆಸರನ್ನು ಪ್ರಸ್ತಾಪಿಸಿದ್ದ ಮಿರಾಜ್ ಶಾ ಅವರ ಸ್ಥಳಗಳ ಮೇಲೂ ದಾಳಿ ನಡೆದಿದೆ.
ಇದೇ 23 ಮತ್ತು 29ರಂದು ಮತದಾನ ನಡೆಯುತ್ತಿದ್ದು, ಅದಕ್ಕೂ ಮುನ್ನವೇ ಐಟಿ ದಾಳಿ ನಡೆಸುವ ಮೂಲಕ ಪಕ್ಷವನ್ನು ಬೆದರಿಸುವ ಮತ್ತು ಅಭ್ಯರ್ಥಿಗಳಿಗೆ ಕಿರುಕುಳ ನೀಡುವ ಯತ್ನ ಇದಾಗಿದೆ ಎಂದು ಟಿಎಂಸಿ ಆರೋಪಿಸಿದೆ.
ಐಟಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿಯವರು, ಐಟಿ ಇಲಾಖೆ ನಡೆಸಿದ ದಾಳಿಗಳು ರಾಜಕೀಯ ಪ್ರೇರಿತವಾಗಿದ್ದು, ವಿರೋಧ ಪಕ್ಷದ ನಾಯಕರನ್ನು ಬೆದರಿಸಲು ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

