ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುವ ವ್ಯವಹಾರ, ವ್ಯಾಪಾರ ಅಥವಾ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ವೇತನ ಸಹಿತ ರಜೆ ನೀಡಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
ಕೇರಳ ವಿಧಾನಸಭೆಗೆ ಏ.9ರಂದು ಮತದಾನ ನಡೆಯುತ್ತಿದೆ. ಈ ಆದೇಶವು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ವೇತನ ಸಹಿತ ರಜೆ ನೀಡಿರುವ ನಿಬಂಧನೆಯನ್ನು ಉಲ್ಲಂಘಿಸುವ ವ್ಯವಸ್ಥಾಪಕರು ಅಥವಾ ಉದ್ಯೋಗದಾತರು ದಂಡಕ್ಕೆ ಗುರಿಯಾಗುತ್ತಾರೆ. ಎಲ್ಲಾ ದಿನಗೂಲಿ ಮತ್ತು ತಾತ್ಕಾಲಿಕ ನೌಕರರಿಗೂ ಮತದಾನದ ದಿನದಂದು ವೇತನ ಸಹಿತ ರಜೆ ಇರಲಿದೆ ಎಂದು ಆಯೋಗ ಹೇಳಿದೆ.
ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಎಲ್ಲಾ ಮತದಾರರು ತಮ್ಮ ಮತವನ್ನು ಮುಕ್ತವಾಗಿ ಚಲಾಯಿಸಲು ಅನುಕೂಲ ಮಾಡಿಕೊಡುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಚುನಾವಣಾ ಆಯೋಗ ನಿರ್ದೇಶಿಸಿದೆ.

