ಭೋಪಾಲ್ : ಕಾಂಗ್ರೆಸ್ ನಾಯಕರು ದೇಶದ ತೈಲ ಪರಿಸ್ಥಿತಿಯ ಬಗ್ಗೆ ವಿಷಾದವನ್ನು ವ್ಯಕ್ತ ಪಡಿಸಿ, ಕೇಂದ್ರ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ. ಇನ್ನೊಂದು ಕಡೆ, ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರು, ದೇಶದಲ್ಲಿ ತೈಲ ಅಭಾವದಂತಹ ಯಾವುದೇ ಪರಿಸ್ಥಿತಿಯಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್, ದೇಶದಲ್ಲಿ ಗ್ಯಾಸ್ ಅಥವಾ LPG ಕೊರತೆಯಿದೆ ಎಂದು ನನಗನಿಸುವುದಿಲ್ಲ. ಅಂತಹ ಯಾವುದೇ ಅಭಾವವಿಲ್ಲ. ಅಭಾವವಿದೆ ಎನ್ನುವ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕಮಲ್ ನಾಥ್ ಹೇಳಿಕೆ, ಕಾಂಗ್ರೆಸ್ ಪಾರ್ಟಿಯ ಮುಜುಗರಕ್ಕೆ ಕಾರಣವಾಗಿದೆ.
ಸ್ವಪಕ್ಷದ ವಿರುದ್ದವೇ ಕಮಲ್ ನಾಥ್ ಹೇಳಿಕೆ
ಮಧ್ಯಪ್ರದೇಶದ ಛಿಂದ್ವಾರದಲ್ಲಿ ಮಾತನಾಡುತ್ತಿದ್ದ ಕಮಲ್ ನಾಥ್, "ದೇಶದಲ್ಲಿ ಗ್ಯಾಸ್ ಅಥವಾ ಎಲ್ಪಿಜಿಯಲ್ಲಿ ಯಾವುದೇ ಕೊರತೆಯಿಲ್ಲ. ಗ್ಯಾಸ್ ಅಭಾವವಿದೆ ಎನ್ನುವ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಅಂತಹ ಯಾವುದೇ ಸಮಸ್ಯೆ ಇರುವುದು ನನ್ನ ಪ್ರಕಾರವಿಲ್ಲ" ಎಂದು ಕಮಲ್ ನಾಥ್ ಹೇಳಿದ್ದಾರೆ. ಹಿರಿಯ ನಾಯಕ ಕಮಲ್ ನಾಥ್ ಅವರ ಹೇಳಿಕೆಯು, ಕಾಂಗ್ರೆಸ್ ತೆಗೆದುಕೊಂಡಿರುವ ನಿಲುವಿಗೆ ವಿರುದ್ದವಾದದ್ದು ಎಂದು ವಿಶ್ಲೇಷಿಸಲಾಗುತ್ತಿದೆ.
ಗ್ಯಾಸ್ ಸಮಸ್ಯೆಯಿಂದ ದೇಶ ಸ್ತಬ್ದ ಎಂದ ಕಾಂಗ್ರೆಸ್ ಸಂಸದ
ಲೋಕಸಭೆಯ ಶುಕ್ರವಾರದ (ಏ. 2) ಅಧಿವೇಶನದ ಶೂನ್ಯವೇಳೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಸಂಸದ ವಿಜಯ್ ವಸಂತ್, ದೇಶದಲ್ಲಿ ಗಂಭೀರ ಎಲ್ಪಿಜಿ ಸಮಸ್ಯೆಯಿದೆ. ಕೇಂದ್ರ ಸರ್ಕಾರದ ದುರಾಡಳಿತ ಮತ್ತು ನಿಷ್ಕ್ರಿಯತೆಯಿಂದಾಗಿ, ದೇಶದ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಎಲ್ಪಿಜಿ, ಗ್ಯಾಸ್ ಸಿಲಿಂಡರ್, ಡೀಸೆಲ್, ಪೆಟ್ರೋಲ್ ಸಮಸ್ಯೆಯಿಂದಾಗಿ, ದೇಶದ ಚಟುವಟಿಕೆ ಸ್ತಬ್ದಗೊಂಡಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಎಂಪಿ ಹೇಳಿದ್ದರು.
ಕಾಂಗ್ರೆಸ್ ನಾಯಕರ ದ್ವಂದ್ವ ಹೇಳಿಕೆ
ಕಾಂಗ್ರೆಸ್ ನಾಯಕರ ಹೇಳಿಕೆ ಮತ್ತು ಪಾರ್ಟಿ ಈ ವಿಚಾರದಲ್ಲಿ ತೆಗೆದುಕೊಂಡಿರುವ ನಿಲುವಿಗೆ ವಿರುದ್ದವಾದ ಹೇಳಿಕೆಯನ್ನು ಹಿರಿಯ ನಾಯಕ ಕಮಲ್ ನಾಥ್ ನೀಡಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ಹೇಳುವುದು ಒಂದು, ಹೊರಗಡೆ, ಪಾರ್ಟಿಯ ಹಿರಿಯ ನಾಯಕರು ಪಡುತ್ತಿರುವ ಅಭಿಪ್ರಾಯ ಇನ್ನೊಂದು. ಹೀಗಿದ್ದಾಗ, ನಿಜವಾದ ಮಾಹಿತಿ ಯಾವುದು ಎನ್ನುವ ಗೊಂದಲ ಸಾರ್ವಜನಿಕರಲ್ಲಿ ಕಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ
ಜನರು ಒಂದು ಸಿಲಿಂಡರ್, ಒಂದು ಲೀಟರ್ ಪೆಟ್ರೋಲ್ ಹಾಕಿಸಿಕೊಳ್ಳಲು ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು, ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸರ್ಕಾರವು ಈ ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಬೇಕು, ಸಾರ್ವಜನಿಕರಿಗೆ ತಡೆರಹಿತ ತೈಲ ಸರಬರಾಜು ಇರಬೇಕು. ಇದಕ್ಕಾಗಿ, ಮೋದಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಭಾರತದಲ್ಲಿ ಇಂಧನ ಅಥವಾ ಅನಿಲದ ಕೊರತೆಯಾಗುವ ಯಾವುದೇ ಆತಂಕವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟ ಪಡಿಸಿದ್ದರು.

