ಗುವಾಹಟಿ: ಮಣಿಪುರದ ಉಖ್ರುಲ್‌ನಲ್ಲಿ ಶುಕ್ರವಾರ ಕುಕಿ ಮತ್ತು ನಾಗಾಗಳ ನಡುವೆ ಮತ್ತೆ ಹಿಂಸಾಚಾರ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಮೃತರಲ್ಲಿ ಇಬ್ಬರು ಕುಕಿ ಸಮುದಾಯದವರಾಗಿದ್ದರೆ, ಇನ್ನೋರ್ವ ವ್ಯಕ್ತಿ ತಂಗ್‌ಖುಲ್ ನಾಗಾ ಜನಾಂಗಕ್ಕೆ ಸೇರಿದ್ದಾನೆ.
ಮುಲ್ಲಮ್ ಮತ್ತು ಶೋಂಗ್‌ಫಲ್ ಗ್ರಾಮಗಳ 'ನಿರಾಯುಧ ನಾಗರಿಕರು ತಮ್ಮ ಮನೆಗಳಲ್ಲಿ ನಿದ್ರಿಸಿದ್ದಾಗ ' ಶಸ್ತ್ರಸಜ್ಜಿತ ತಂಗ್‌ಖುಲ್ ನಾಗಾಗಳ ಗುಂಪು ಬೆಳಗಿನ ಜಾವ ನಡೆಸಿದ ದಾಳಿಯನ್ನು ಕುಕಿ ಆರ್ಗನೈಸೇಷನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಖಂಡಿಸಿದೆ.
ಪರವಾನಿಗೆ ಹೊಂದಿದ ಬೇಟೆಯಾಡುವ ಶಸ್ತ್ರಾಸ್ತ್ರಗಳೊಂದಿಗೆ ಆತ್ಮತಕ್ಷಣೆಯ ತಮ್ಮ ಕಾನೂನುಬದ್ಧ ಹಕ್ಕು ಚಲಾಯಿಸಿದ ಗ್ರಾಮಸ್ಥರು ಧೈರ್ಯದಿಂದ ದಾಳಿಯನ್ನು ಹಿಮ್ಮೆಟ್ಟಿಸಿದ್ದಾರೆ ಮತ್ತು ಓರ್ವ ಸಶಸ್ತ್ರ ದಾಳಿಕೋರನನ್ನು ಕೊಂದಿದ್ದಾರೆ ಎಂದು ಸಂಘಟನೆಯು ಹೇಳಿಕೆಯಲ್ಲಿ ತಿಳಿಸಿದೆ.
ತಂಗ್‌ಖುಲ್ ನಾಗಾಗಳು ಮುಲ್ಲಮ್ ಗ್ರಾಮದ ಮೇಲೆ ದಾಳಿ ನಡೆಸಿದ ಆರೋಪವನ್ನು ನಾಗಾ ವಿಲೇಜ್ ಗಾರ್ಡ್‌ನ ಸೆಂಟ್ರಲ್ ಕಮಾಂಡ್ ನಿರಾಕರಿಸಿದೆ. ತನ್ನ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ ಸಶಸ್ತ್ರ ಕುಕಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದಾಗ ಪ್ರತಿದಾಳಿ ನಡೆಸಿದ್ದಾರೆ ಎಂದು ಅದು ಹೇಳಿದೆ.

