ನವದೆಹಲಿ : ಕಳೆದ ಒಂದು ದಶಕದಲ್ಲಿ ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯು ದೊಡ್ಡ ಮಟ್ಟದ ವಿಸ್ತರಣೆಯನ್ನು ಕಂಡಿದ್ದರೂ ಸಹ, ದೇಶಾದ್ಯಂತ ಸಾವಿರಾರು ಶಾಲೆಗಳಲ್ಲಿ ವಿದ್ಯುತ್, ಶೌಚಾಲಯ, ಕುಡಿಯುವ ನೀರು ಮತ್ತು ಡಿಜಿಟಲ್ ಮೂಲಸೌಕರ್ಯಗಳಂತಹ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ನೀತಿ ಆಯೋಗದ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.
"ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ: ಗುಣಮಟ್ಟ ವರ್ಧನೆಗಾಗಿ ತಾತ್ಕಾಲಿಕ ವಿಶ್ಲೇಷಣೆ ಮತ್ತು ನೀತಿ ಮಾರ್ಗಸೂಚಿ" ಎಂಬ ಶೀರ್ಷಿಕೆಯ ಈ ವರದಿಯು ದೇಶದ ಶಿಕ್ಷಣ ಕ್ಷೇತ್ರದಲ್ಲಿನ ಪ್ರಗತಿ ಮತ್ತು ಅಸಮಾನತೆಯ ಮಿಶ್ರ ಚಿತ್ರಣವನ್ನು ನೀಡಿದೆ.
ಶೌಚಾಲಯ ಮತ್ತು ನೀರು: ಸುಮಾರು 98,592 ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯಗಳಿಲ್ಲ. 61,540 ಶಾಲೆಗಳಲ್ಲಿ ಯಾವುದೇ ಬಳಕೆಯೋಗ್ಯ ಶೌಚಾಲಯವೇ ಇಲ್ಲ. 14,505 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ ಮತ್ತು ಸುಮಾರು 59,829 ಶಾಲೆಗಳಲ್ಲಿ ಕೈ ತೊಳೆಯುವ ವ್ಯವಸ್ಥೆಯಿಲ್ಲ.
ಸುಮಾರು 1.19 ಲಕ್ಷ ಶಾಲೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕವಿಲ್ಲ. ಇದು ಡಿಜಿಟಲ್ ಶಿಕ್ಷಣ ಮತ್ತು ಆಧುನಿಕ ಕಲಿಕಾ ವಿಧಾನಗಳಿಗೆ ಅಡ್ಡಿಯಾಗಿದೆ. ಕೇವಲ ಶೇ. 51.7 ರಷ್ಟು ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಾತ್ರ ವಿಜ್ಞಾನ ಪ್ರಯೋಗಾಲಯಗಳಿವೆ.
ಶಿಕ್ಷಕರ ಕೊರತೆ:
ದೇಶಾದ್ಯಂತ ಸುಮಾರು 1,04,125 ಶಾಲೆಗಳು ಕೇವಲ ಒಬ್ಬನೇ ಶಿಕ್ಷಕನಿಂದ ನಡೆಯುತ್ತಿವೆ. ಇವುಗಳಲ್ಲಿ ಶೇ. 89 ರಷ್ಟು ಶಾಲೆಗಳು ಗ್ರಾಮೀಣ ಭಾಗದಲ್ಲಿವೆ.
ಹುದ್ದೆಗಳ ಖಾಲಿ: ಬಿಹಾರದಲ್ಲಿ ಅತಿ ಹೆಚ್ಚು (2,08,784) ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಜಾರ್ಖಂಡ್‌ನಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವು 47:1 ರಷ್ಟಿದೆ ( ಅನುಪಾತ 18:1 ಇರಬೇಕು).
ತಾವು ಬೋಧಿಸುವ ವಿಷಯಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕ ಗಳಿಸಲು ಕೇವಲ ಶೇ. 10-15 ರಷ್ಟು ಶಿಕ್ಷಕರಿಗೆ ಮಾತ್ರ ಸಾಧ್ಯವಾಗಿದೆ. ಗಣಿತದಲ್ಲಿ ಕೇವಲ ಶೇ. 2 ರಷ್ಟು ಶಿಕ್ಷಕರು ಮಾತ್ರ ಶೇ. 70 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
ಶಾಲೆ ತೊರೆಯುತ್ತಿರುವ ವಿದ್ಯಾರ್ಥಿಗಳು :
ರಾಷ್ಟ್ರೀಯ ಮಟ್ಟದಲ್ಲಿ ಪ್ರೌಢಶಾಲಾ ಹಂತದಲ್ಲಿ ಶೇ. 11.5 ರಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ತೊರೆಯುತ್ತಿದ್ದಾರೆ.
ಪಿಯುಸಿಗೆ ತಲುಪುವಷ್ಟರಲ್ಲಿ ದಾಖಲಾತಿ ಪ್ರಮಾಣ ಶೇ. 58.4 ಕ್ಕೆ ಇಳಿಯುತ್ತದೆ. ಅಂದರೆ ಸುಮಾರು ಶೇ. 40 ರಷ್ಟು ವಿದ್ಯಾರ್ಥಿಗಳು 12ನೇ ತರಗತಿಯವರೆಗೆ ಶಿಕ್ಷಣವನ್ನು ಮುಂದುವರಿಸುತ್ತಿಲ್ಲ.
ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಡ್ರಾಪ್‌ಔಟ್ ದರವಿದೆ (ಶೇ. 20), ನಂತರದ ಸ್ಥಾನಗಳಲ್ಲಿ ಅರುಣಾಚಲ ಪ್ರದೇಶ ಮತ್ತು ಕರ್ನಾಟಕ (ಶೇ. 18.3) ಇವೆ.
ಶೂನ್ಯ ದಾಖಲಾತಿ ಶಾಲೆಗಳು:
ದೇಶದಲ್ಲಿ ಸುಮಾರು 7,993 ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ದಾಖಲಾಗಿಲ್ಲ. ಇವುಗಳಲ್ಲಿ ಪಶ್ಚಿಮ ಬಂಗಾಳ (3,812) ಮತ್ತು ತೆಲಂಗಾಣ (2,245) ಅಗ್ರಸ್ಥಾನದಲ್ಲಿವೆ.
ಭಾರತವು ತನ್ನ ಒಟ್ಟು ಜಿಡಿಪಿಯ (ಉಆP) ಕೇವಲ ಶೇ. 4.6 ರಷ್ಟನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ. ಇದು ಅಮೆರಿಕ (ಶೇ. 5.9), ಜರ್ಮನಿ (ಶೇ. 5.4) ಮತ್ತು ಯುಕೆ ಅಂತಹ ದೇಶಗಳಿಗಿಂತ ಕಡಿಮೆಯಿದೆ.
ನೀತಿ ಆಯೋಗವು ರಾಜ್ಯ ಸರ್ಕಾರಗಳಿಗೆ ಶಾಲಾ ಕಟ್ಟಡಗಳು, ನೈರ್ಮಲ್ಯ ವ್ಯವಸ್ಥೆ, ವಿದ್ಯುತ್ ಪೂರೈಕೆ ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಬಲಪಡಿಸಲು ದೀರ್ಘಕಾಲದ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಮತ್ತು "ಮೂಲಭೂತ ಸೌಕರ್ಯಗಳ ಸಾರ್ವತ್ರಿಕ ಲಭ್ಯತೆ"ಗೆ ಆದ್ಯತೆ ನೀಡುವಂತೆ ಸೂಚಿಸಿದೆ.

