ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ)ದ ಆಶ್ರಯದಲ್ಲಿ ಹೊಸದಿಲ್ಲಿಯ ಶಾಸ್ತ್ರಿ ಭವನದ ಹೊರಗೆ ಬೃಹತ್ ಪ್ರತಿಭಟನೆ ನಡೆಯಿತು.
ಅಲ್ಲಿ ''ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ, ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ'', ''ಪೇಪರ್ ಲೀಕ್, ಮೋದಿ ಸರ್ಕಾರ್ ವೀಕ್ (ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ, ಮೋದಿ ಸರಕಾರ ದುರ್ಬಲವಾಗಿದೆ)'' ಮತ್ತು ''ವೈದ್ಯ ಪದವಿ ಮಾರಾಟಕ್ಕಿದೆ'' ಎಂಬ ಘೋಷಣಾ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
''ಛಾತ್ರೋ ಪೆ ಅತ್ಯಾಚಾರ್ ಬಂದ್ ಕರೋ (ವಿದ್ಯಾರ್ಥಿಗಳ ದಮನವನ್ನು ನಿಲ್ಲಿಸಿ)'' ಎಂಬ ಘೋಷಣೆಗಳನ್ನೂ ಪ್ರತಿಭಟನಾಕಾರರು ಕೂಗಿದರು.
ಪೊಲಿಸರು ಶಾಸ್ತ್ರಿ ಭವನದ ಹೊರಗೆ ಭಾರೀ ಬಂದೋಬಸ್ತ್ ಏರ್ಪಡಿಸಿದ್ದರು.
ನೀಟ್ ಪರೀಕ್ಷಾ ಪ್ರಕ್ರಿಯೆಯಲ್ಲಿ ಬೃಹತ್ ಪ್ರಮಾಣದ ಅವ್ಯವಹಾರಗಳು ಮತ್ತು ಗಂಭೀರ ಲೋಪಗಳು ತಲೆದೋರಿವೆ ಎನ್ನುವುದನ್ನು ಪರೀಕ್ಷೆ ರದ್ದತಿ ಸಾಬೀತುಪಡಿಸಿದೆ ಎಂದು ಎನ್ಎಸ್ಯುಐ ಹೇಳಿದೆ.
ಲಕ್ಷಾಂತರ ಕಠಿಣ ಪರಿಶ್ರಮಿ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಕೇಂದ್ರ ಸರಕಾರವು ಪದೇ ಪದೇ ವಿಫಲವಾಗುತ್ತಿದೆ ಎಂದು ಎನ್ಎಸ್ಯುಐ ಆರೋಪಿಸಿದೆ.
''ನೀಟ್ ರದ್ದುಪಡಿಸುವ ಸರಕಾರದ ಇಂದಿನ ನಿರ್ಧಾರವು ವಿದ್ಯಾರ್ಥಿ ಶಕ್ತಿ ಮತ್ತು ದೇಶಾದ್ಯಂತದ ಲಕ್ಷಾಂತರ ನೀಟ್ ಆಕಾಂಕ್ಷಿಗಳಿಗೆ ಲಭಿಸಿದ ವಿಜಯವಾಗಿದೆ'' ಎಂದು ಎನ್ಎಸ್ಯುಐ ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಾಖರ್ ಹೇಳಿದರು.
''ಪರೀಕ್ಷಾ ವ್ಯವಸ್ಥೆ ನ್ಯಾಯಯುತವಾಗಿದ್ದರೆ ಪರೀಕ್ಷೆಯನ್ನು ರದ್ದುಪಡಿಸಿ ಸಿಬಿಐ ತನಿಖೆಗೆ ಆದೇಶ ನೀಡುವ ಬಲವಂತಕ್ಕೆ ಸರಕಾರ ಒಳಗಾಗುತ್ತಿರಲಿಲ್ಲ. ಇದು ಸ್ಪಷ್ಟವಾಗಿ ಶಿಕ್ಷಣ ಸಚಿವಾಲಯ ಮತ್ತು ಎನ್ಟಿಎನ ವೈಫಲ್ಯವನ್ನು ತೋರಿಸುತ್ತದೆ'' ಎಂದು ಅವರು ಹೇಳಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು ಹಾಗೂ ಎನ್ಟಿಎಯನ್ನು ನಿಷೇಧಿಸಬೇಕು ಎಂದು ಜಾಖರ್ ಒತ್ತಾಯಿಸಿದರು. ಈ ಸಂಸ್ಥೆಯು ವಿಶ್ವಾಸಾರ್ಹ ಪರೀಕ್ಷೆಗಳನ್ನು ನಡೆಸಲು ಪದೇ ಪದೇ ವಿಫಲವಾಗಿದೆ ಎಂದರು.
ಪದೇ ಪದೇ ನೀಟ್ನ್ನು ಆವರಿಸುವ ವಿವಾದಗಳು ಪರೀಕ್ಷಾ ವ್ಯವಸ್ಥೆ ಮೇಲೆ ವಿದ್ಯಾರ್ಥಿಗಳ ನಂಬಿಕೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಎನ್ಎಸ್ಯುಐ ಹೇಳಿದೆ. ಹಗರಣದಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮ ಜರಗುವವರೆಗೆ ಶೈಕ್ಷಣಿಕ ನ್ಯಾಯ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸಿ ಎನ್ಎಸ್ಯುಐ ನಡೆಸುತ್ತಿರುವ ಚಳವಳಿ ಮುಂದುವರಿಯುತ್ತದೆ ಎಂದು ಅವರು ಘೋಷಿಸಿದರು.

