ಇಸ್ಲಾಮಾಬಾದ್: ಅಮೆರಿಕದ ದಾಳಿಯಿಂದ ತಪ್ಪಿಸಿಕೊಳ್ಳಲು ಇರಾನ್ ಯುದ್ಧ ವಿಮಾನಗಳಿಗೆ ಪಾಕಿಸ್ತಾನ ಆಶ್ರಯ ನೀಡಿದೆ ಎಂಬ ಅಮೆರಿಕದ ಮಾಧ್ಯಮ ವರದಿಯನ್ನು ಪಾಕಿಸ್ತಾನ ನಿರಾಕರಿಸಿದೆ.
ಅಮೆರಿಕದ ಸಿಬಿಎಸ್ ಸುದ್ದಿ ಸಂಸ್ಥೆ ಪ್ರಕಟಿಸಿದ್ದ ವರದಿಯಲ್ಲಿ, ಅಮೆರಿಕದ ದಾಳಿಯಿಂದ ರಕ್ಷಣೆ ನೀಡುವ ಉದ್ದೇಶದಿಂದ ಆರ್ಸಿ-130 ರಿಕನೈಸಾನ್ಸ್ ವಿಮಾನ ಸೇರಿದಂತೆ ಕೆಲವು ಇರಾನ್ ಯುದ್ಧ ವಿಮಾನಗಳನ್ನು ರಾವಲ್ಪಿಂಡಿ ಸಮೀಪದ ನೂರ್ ಖಾನ್ ವಾಯುನೆಲೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ, ಇರಾನ್-ಅಮೆರಿಕ ನಡುವಿನ ಶಾಂತಿ ಮಾತುಕತೆಗಳು ಸೂಕ್ಷ್ಮ ಹಂತ ತಲುಪಿವೆ. ಇರಾನ್ ನೀಡಿದ್ದ ಶಾಂತಿ ಪ್ರಸ್ತಾವವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ತ್ಯಾಜ್ಯದ ತುಂಡು' ಎಂದು ಟೀಕಿಸಿದ್ದರು. "ಆ ಪ್ರಸ್ತಾವನೆಯನ್ನು ಪೂರ್ಣವಾಗಿ ಓದಲೂ ಇಲ್ಲ" ಎಂದೂ ಅವರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಸ್ಪಷ್ಟನೆ ನೀಡಿದ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಅಂತಹ ವರದಿಗಳು ದಾರಿ ತಪ್ಪಿಸುವ ಹಾಗೂ ರೋಚಕತೆ ಸೃಷ್ಟಿಸುವ ಪ್ರಯತ್ನಗಳಾಗಿವೆ ಎಂದು ಹೇಳಿದೆ.
ಎಪ್ರಿಲ್ 11ರಂದು ಇರಾನ್ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳ ನಡುವೆ ನಡೆದ ಶಾಂತಿ ಮಾತುಕತೆಗಳ ಅಂಗವಾಗಿ ರಾಜತಾಂತ್ರಿಕ ಸರಕು ಸಾಗಣೆಗಾಗಿ ಒಂದು ವಿಮಾನ ಪಾಕಿಸ್ತಾನಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ ಇರಾನ್ ಮತ್ತು ಅಮೆರಿಕ ಎರಡೂ ದೇಶಗಳು ನೂರ್ ಖಾನ್ ವಾಯುನೆಲೆಯನ್ನು ಬಳಸಿಕೊಂಡಿದ್ದವು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
"ಕದನ ವಿರಾಮದ ಅವಧಿಯಲ್ಲಿ ಆಗಮಿಸಿದ್ದ ಇರಾನ್ ವಿಮಾನವೊಂದು ಸದ್ಯ ಪಾಕಿಸ್ತಾನದಲ್ಲಿ ನಿಲುಗಡೆಗೊಂಡಿದೆ. ಆದರೆ ಇದಕ್ಕೆ ಯಾವುದೇ ಸೇನಾ ತುರ್ತು ಪರಿಸ್ಥಿತಿ ಅಥವಾ ರಕ್ಷಣಾತ್ಮಕ ಕಾರ್ಯಾಚರಣೆಯೊಂದಿಗೂ ಸಂಬಂಧವಿಲ್ಲ" ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿದೆ.
ವಾಯುನೆಲೆಯಲ್ಲಿ ದೊಡ್ಡ ಪ್ರಮಾಣದ ಸೇನಾ ಚಟುವಟಿಕೆಯನ್ನು ರಹಸ್ಯವಾಗಿಡುವುದು ಅಸಾಧ್ಯ ಎಂದೂ ಅದು ತಿಳಿಸಿದೆ.
ಇದೇ ವೇಳೆ, ಪಾಕಿಸ್ತಾನವು ಇರಾನ್ನ ನೈಜ ಸ್ಥಿತಿಗಿಂತ ಹೆಚ್ಚು ಸಕಾರಾತ್ಮಕ ಚಿತ್ರಣವನ್ನು ಅಮೆರಿಕ ಎದುರು ಬಿಂಬಿಸುತ್ತಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

