ಸಾರಿಗೆ,ತೂಕ,ದಾಸ್ತಾನು ಮತ್ತು ಇತರ ಶುಲ್ಕಗಳ ಕಡಿತದ ಬಳಿಕ ಅವರಿಗೆ ಸಿಕ್ಕಿದ್ದು ಸೊನ್ನೆ ಮಾತ್ರ, ಬದಲಿಗೆ ಒಂದು ರೂ.ಯನ್ನು ಪಾವತಿಸುವಂತೆ ಅವರಿಗೇ ಸೂಚಿಸಲಾಗಿತ್ತು.
ಮೇ 3ರಂದು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಮಾರಾಟ ಮಾಡಲು ಯತ್ನಿಸಿದ್ದೆ. ಆದರೆ ಅತ್ಯಂತ ಕಡಿಮೆ ಬೆಲೆ ಸಿಕ್ಕಿದ್ದರಿಂದ ಉಳಿದ ಈರುಳ್ಳಿಯನ್ನು ಭಾರವಾದ ಮನಸ್ಸಿನಿಂದ ಅಲ್ಲಿಯೇ ಎಸೆದು ಬಂದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಗಲಧರ ತಿಳಿಸಿದರು.
ಅವರ ಒಂದು ರೂ.ರಸೀದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಈ ಪ್ರದೇಶವನ್ನು ಕಾಡುತ್ತಿರುವ ಈರುಳ್ಳಿ ಬಿಕ್ಕಟ್ಟಿನ ಕ್ರೂರ ಸಂಕೇತವಾಗಿದೆ. ಕುಸಿಯುತ್ತಿರುವ ಈರುಳ್ಳಿ ಬೆಲೆಗಳು ಈಗಾಗಲೇ ಸಾಲದ ಸುಳಿಯಲ್ಲಿರುವ ರೈತರಿಗೆ ಕೃಷಿಯಿಂದ ಆರ್ಥಿವಾಗಿ ನಷ್ಟವುಂಟಾಗುತ್ತಿದೆ.
'ಈರುಳ್ಳಿ ಮಾರಾಟದ ನಷ್ಟ ನನ್ನ ಆರ್ಥಿಕ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದೆ. ಎರಡು ವರ್ಷಗಳ ಹಿಂದಷ್ಟೇ ಮಗಳ ಮದುವೆ ಮಾಡಿದ್ದೆ,ಅದಕ್ಕಾಗಿ ಅವರಿವರಿಂದ ಪಡೆದಿದ್ದ ಸಾಲವನ್ನು ಇನ್ನೂ ತೀರಿಸಲು ಸಾಧ್ಯವಾಗಿಲ್ಲ. ಈರುಳ್ಳಿ ಬಿಕ್ಕಟ್ಟು ನನ್ನನ್ನು ಕಂಗಾಲಾಗಿಸಿದೆ' ಎಂದು ಗಲಧರ ಅಳಲು ತೋಡಿಕೊಂಡರು.
ಗುಣಮಟ್ಟದ ಸಮಸ್ಯೆಗಳು ಮತ್ತು ಅತಿಯಾದ ಪೂರೈಕೆ ಬೆಲೆ ಕುಸಿತಕ್ಕೆ ಕಾರಣ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
'ವಹಿವಾಟಿಗೂ ಮುನ್ನವೇ ಇದರಿಂದೇನೂ ಲಾಭವಿಲ್ಲ ಎಂದು ನಾವು ಗಲಧರ ಅವರಿಗೆ ತಿಳಿಸಿದ್ದೆವು. ಆದಾಗ್ಯೂ ನಂತರ ಸರಕಾರದಿಂದ ಏನಾದರೂ ನೆರವು ಸಿಗಬಹುದು ಎಂಬ ಭರವಸೆಯಿಂದ ಅವರು ಈರುಳ್ಳಿ ಮಾರಾಟ ಮಾಡಲು ಪಟ್ಟು ಹಿಡಿದಿದ್ದರು' ಎಂದು ಎಪಿಎಂಸಿಯ ವ್ಯಾಪಾರಿ ಇಬ್ರಾಹಿಂ ಬಾಗವಾನ್ ತಿಳಿಸಿದರು. ಉತ್ತಮ ಗುಣಮಟ್ಟದ ಈರುಳ್ಳಿಗೆ ಪ್ರಸ್ತುತ ಪ್ರತಿ 100 ಕೆ.ಜಿ.ಗೆ 400ರಿಂದ 800 ರೂ.ವರೆಗೆ ಬೆಲೆ ಸಿಗುತ್ತಿದೆ ಎಂದರು.
ಆದರೆ ಇದೊಂದು ವ್ಯಾಪಕ ವ್ಯವಸ್ಥಿತ ಸಮಸ್ಯೆ ಎಂದು ಮಾರುಕಟ್ಟೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಸ್ಥಳೀಯ ಮಾರುಕಟ್ಟೆಗಳಿಗೆ ಭಾರೀ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದ್ದು,ಬೇಡಿಕೆ ಮತ್ತು ಪೂರೈಕೆ ನಡುವೆ ಭಾರೀ ಅಂತರವಿದೆ. ಸಮಸ್ಯೆಯನ್ನು ಪರಿಹರಿಸಲು ಸರಕಾರವು ಪ್ರಸ್ತುತ ಖರೀದಿ ಮತ್ತು ರಫ್ತು ನೀತಿಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ಪಠಾಡೆ ಹೇಳಿದರು.
ರಾಜಕಾರಣಿಗಳು ಈರುಳ್ಳಿ ಬಿಕ್ಕಟ್ಟಿನ ಕರಿತು ಸರಕಾರದ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.
ಸರಕಾರವು ಕೇವಲ ಘೋಷಣೆಗಳನ್ನು ಹೊರಡಿಸುವುದರಲ್ಲಿಯೇ ಕಾಲ ಕಳೆಯುತ್ತಿದೆ. ಇಂದು ಈರುಳ್ಳಿ ಬೆಳೆಗಾರರು ಸಂಪೂರ್ಣವಾಗಿ ಹೈರಾಣಾಗಿದ್ದಾರೆ. ಸರಕಾರವು ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲೇಬೇಕು. ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ಇನ್ನು ಮುಂದೆ ಯಾವುದೇ ರೈತ ಈರುಳ್ಳಿಯನ್ನು ಬೆಳೆಯುವುದಿಲ್ಲ ಎಂದು ಜಾಲ್ನಾ ಸಂಸದ ಕಲ್ಯಾಣ ಕಾಳೆ ಹೇಳಿದರು.

