ಮೌಜ್‌ಪುರ ಪ್ರದೇಶದಲ್ಲಿ ಫೈಝಾನ್ ಹಾಗೂ ಇತರ ನಾಲ್ವರು ಗಾಯಗೊಂಡ ಸ್ಥಿತಿಯಲ್ಲಿ ರಸ್ತೆಬದಿಯಲ್ಲಿ ಬಿದ್ದಿದ್ದಾಗ, ಪೊಲೀಸರು ಅವರನ್ನು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸಿ ಲಾಠಿಗಳಿಂದ ಥಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹಲ್ಲೆ ನಡೆಸುವ ವೇಳೆ ಪೊಲೀಸರು "ಯೇ ಲೋ ಆಝಾದಿ" ಎಂದು ಹೇಳುತ್ತಿರುವುದು ಕೂಡ ವಿಡಿಯೊಗಳಲ್ಲಿ ಕೇಳಿಬಂದಿತ್ತು.
ಹಲ್ಲೆಯ ಬಳಿಕ ಫೈಝಾನ್ ಅವರನ್ನು ಒಂದು ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು. ಬಳಿಕ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಮರುದಿನ ಅವರು ಮೃತಪಟ್ಟಿದ್ದರು.
ಪ್ರಕರಣದ ಆರಂಭಿಕ ತನಿಖೆಯನ್ನು ದಿಲ್ಲಿ ಪೊಲೀಸರು ನಡೆಸಿದ್ದರು. ಆದರೆ ಹಲ್ಲೆ ನಡೆಸಿದ ಪೊಲೀಸರನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ವರದಿ ಸಲ್ಲಿಸಿದ್ದರು. ತನಿಖೆಯ ವೈಖರಿಯನ್ನು ಪ್ರಶ್ನಿಸಿದ್ದ ದಿಲ್ಲಿ ಹೈಕೋರ್ಟ್, ಬಳಿಕ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.
ಇಬ್ಬರ ವಿರುದ್ಧ ಮಾತ್ರ ಆರೋಪ:
ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹೆಡ್ ಕಾನ್‌ಸ್ಟೆಬಲ್ ರವೀಂದರ್ ಕುಮಾರ್ ಮತ್ತು ಕಾನ್‌ಸ್ಟೆಬಲ್ ಪವನ್ ಯಾದವ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗಿದೆ. ಆದರೆ ಅವರ ವಿರುದ್ಧ ಕೊಲೆ ಆರೋಪ ದಾಖಲಿಸದೆ, 'ಕೊಲೆಗೆ ಸಮಾನವಲ್ಲದ ನರಹತ್ಯೆ', ಗುಂಪು ಹಲ್ಲೆ ಹಾಗೂ ಗಂಭೀರ ಗಾಯ ಉಂಟುಮಾಡಿದ ಆರೋಪಗಳನ್ನು ಮಾತ್ರ ಹೊರಿಸಲಾಗಿದೆ.
ಸಿಬಿಐ ತನಿಖೆಯ ಪ್ರಕಾರ, ಫೈಝಾನ್‌ಗೆ ಗಂಭೀರ ಗಾಯಗಳಾಗಲು ಈ ಇಬ್ಬರು ಪೊಲೀಸರ ಹಲ್ಲೆಯೇ ಕಾರಣವಾಗಿದೆ. ವಿಡಿಯೊದಲ್ಲಿ ಕೇಳಿಬಂದ "ಯೇ ಲೋ ಆಝಾದಿ" ಎಂಬ ಮಾತುಗಳು ಅವರ ಧ್ವನಿಗೆ ಹೊಂದಿಕೆಯಾಗಿವೆ ಎಂದು ಧ್ವನಿ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಅಲ್ಲದೆ, ಸುಳ್ಳು ಪತ್ತೆ ಪರೀಕ್ಷೆಯಲ್ಲೂ ಇಬ್ಬರ ಉತ್ತರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ವಿಡಿಯೊಗಳಲ್ಲಿ ಕಾಣುತ್ತಿದ್ದ ಇತರ ಪೊಲೀಸರನ್ನು ಗುರುತಿಸುವಲ್ಲಿ ಸಿಬಿಐ ವಿಫಲವಾಗಿದೆ.
'ಕರ್ತವ್ಯ ಪಟ್ಟಿ ಇಲ್ಲ' ಎಂದಿದ್ದ ದಿಲ್ಲಿ ಪೊಲೀಸರು:
ಘಟನೆ ನಡೆದ ದಿನ ಆ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಪೊಲೀಸರ ಪಟ್ಟಿ ತಮ್ಮ ಬಳಿ ಇಲ್ಲ ಎಂದು ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಸಿಬಿಐ ತನಿಖೆಯಲ್ಲಿ ಅಂತಹ ಕರ್ತವ್ಯ ಪಟ್ಟಿ ಇದ್ದದ್ದು ಬೆಳಕಿಗೆ ಬಂದಿದೆ.
ದಿಲ್ಲಿ ಸಶಸ್ತ್ರ ಪೊಲೀಸರ 7ನೇ ಬೆಟಾಲಿಯನ್ ಸಿಬ್ಬಂದಿಯನ್ನು ಆ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ. ಅದೇ ಪಟ್ಟಿಯನ್ನು ಬಳಸಿಕೊಂಡೇ ಇಬ್ಬರು ಪೊಲೀಸರನ್ನು ಗುರುತಿಸಲಾಗಿದೆ.
ಕಪಿಲ್ ಮಿಶ್ರಾ ಉಲ್ಲೇಖ:
2020ರ ಫೆಬ್ರುವರಿ 23ರಂದು ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದ ಮೌಜ್‌ಪುರ ಚೌಕ್ ಬಳಿ ಬಿಜೆಪಿ ನಾಯಕ ಹಾಗೂ ದಿಲ್ಲಿ ಸರ್ಕಾರದ ಸಚಿವ ಕಪಿಲ್ ಮಿಶ್ರಾ ಮಾತನಾಡಿದ್ದರು. ಪ್ರತಿಭಟನಾಕಾರರಿಗೆ ರಸ್ತೆ ತೆರವುಗೊಳಿಸಲು ಮೂರು ದಿನಗಳ ಗಡುವು ನೀಡಿದ್ದ ಅವರ ಭಾಷಣದ ವಿಡಿಯೊಗಳು ವ್ಯಾಪಕವಾಗಿ ವೈರಲ್ ಆಗಿದ್ದವು.
ಅದಾದ ಬಳಿಕ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.
ಸಿಬಿಐ ಆರೋಪಪಟ್ಟಿಯಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಹೆಸರು ಉಲ್ಲೇಖವಾಗಿದ್ದರೂ, ಹಿಂಸಾಚಾರ ಪ್ರಚೋದನೆ ಆರೋಪದಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ.
ತಾಯಿಯನ್ನು ಹುಡುಕಲು ಹೋಗಿದ್ದ ಫೈಝಾನ್:
ಫೈಝಾನ್ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 24ರಂದು ಪ್ರತಿಭಟನಾ ಸ್ಥಳದ ಬಳಿ ಕೆಲಸ ಮಾಡುತ್ತಿದ್ದ ತಮ್ಮ ತಾಯಿಯನ್ನು ಹುಡುಕಲು ಕರ್ದಂಪುರಿಯ ಮನೆಯಿಂದ ಹೊರಟಿದ್ದರು. ಆದರೆ ಅವರು ಮನೆಗೆ ಮರಳಲಿಲ್ಲ.
ತಮ್ಮ ಹೇಳಿಕೆಯಲ್ಲಿ, ಪೊಲೀಸರು ಕುತ್ತಿಗೆಯಿಂದ ಎಳೆದುಕೊಂಡು ಹೋಗಿ ಲಾಠಿಯಿಂದ ಹೊಡೆದು, ಒದ್ದು, ಬೂಟಿನಿಂದ ತುಳಿದಿದ್ದಾರೆ ಎಂದು ಫೈಝಾನ್ ಆರೋಪಿಸಿದ್ದರು. "ನಾನು ಏನೂ ಮಾಡಿಲ್ಲ, ಬಿಡಿ" ಎಂದು ಬೇಡಿಕೊಂಡರೂ ಪೊಲೀಸರು ಕೇಳಲಿಲ್ಲ ಎಂದು ಅವರು ಹೇಳಿದ್ದರು.
ವಿಡಿಯೊಗಳಲ್ಲಿ ಹೆಲ್ಮೆಟ್ ಧರಿಸಿದ ಪೊಲೀಸರು ಸರದಿಯಲ್ಲಿ ಫೈಝಾನ್ ತಲೆಗೆ ಲಾಠಿಯಿಂದ ಹೊಡೆಯುತ್ತಿರುವುದು ದಾಖಲಾಗಿತ್ತು.
ಸಿಸಿಟಿವಿ ಕೇಬಲ್ ಗಳ ಸಂಪರ್ಕ ಕಡಿತ:
ಫೈಝಾನ್ ಅವರನ್ನು ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಆ ದಿನ ಠಾಣೆಯ ಸಿಸಿಟಿವಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ದಿಲ್ಲಿ ಪೊಲೀಸರ ಎಸ್‌ಐಟಿ ಹೇಳಿಕೊಂಡಿತ್ತು.
ಆದರೆ ಸಿಬಿಐ ಪರಿಶೀಲನೆಯಲ್ಲಿ ಸಿಸಿಟಿವಿ ರೆಕಾರ್ಡಿಂಗ್ ಘಟಕದ ವಿದ್ಯುತ್ ಕೇಬಲ್‌ಗಳನ್ನು ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ. ಇದನ್ನು "ಸಿಸಿಟಿವಿ ವ್ಯವಸ್ಥೆಗೆ ಉದ್ದೇಶಪೂರ್ವಕ ಹಾನಿ" ಎಂದು ಸಿಬಿಐ ಹೇಳಿದೆ.
ವೈದ್ಯಕೀಯ ವರದಿಯಲ್ಲಿ ವ್ಯತ್ಯಾಸ:
ಫೈಝಾನ್ ಅವರನ್ನು ದಿಲ್ಶಾದ್ ಗಾರ್ಡನ್‌ನ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮೊದಲ ವೈದ್ಯಕೀಯ ವರದಿಯಲ್ಲಿ ತಲೆಯ ಮೇಲೆ ಗಾಯದ ಗುರುತು, ಕಾಲುಗಳಲ್ಲಿ ಊತ ಹಾಗೂ ದೇಹದ ಭಾಗಗಳಲ್ಲಿ ಗಾಯಗಳಿವೆ ಎಂದು ಉಲ್ಲೇಖಿಸಲಾಗಿತ್ತು.
ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಫೈಝಾನ್ ದೇಹದಲ್ಲಿ 20ಕ್ಕೂ ಹೆಚ್ಚು ಗಾಯಗಳಿದ್ದವು ಎಂದು ದಾಖಲಾಗಿದೆ. ಮೊಣಕೈ, ಮೊಣಕಾಲು, ಹೊಟ್ಟೆ ಹಾಗೂ ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಠಾಣೆಗೆ ಪ್ರವೇಶ ನಿರಾಕರಣೆ ಆರೋಪ:
ಫೈಝಾನ್ ತಾಯಿ ಕಿಸ್ಮತುನ್, ತಮ್ಮ ಮಗ ಪೊಲೀಸ್ ಠಾಣೆಯಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕ ಬಳಿಕ ಅಲ್ಲಿಗೆ ತೆರಳಿದ್ದಾಗಿ ಹೇಳಿದ್ದಾರೆ. ಆದರೆ ಪೊಲೀಸರು ಠಾಣೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಮರುದಿನ ಬಿಡುಗಡೆಗೊಂಡಾಗ ಫೈಝಾನ್ ತೀವ್ರವಾಗಿ ಗಾಯಗೊಂಡಿದ್ದರು. "ರಕ್ತದಲ್ಲಿ ತೊಯ್ದ ಬಟ್ಟೆ ಧರಿಸಿದ್ದರು, ನಡೆಯಲು ಕಷ್ಟಪಡುತ್ತಿದ್ದರು" ಎಂದು ಕಿಸ್ಮತುನ್ ಹೇಳಿದ್ದಾರೆ.
ಬಳಿಕ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಲೋಕ ನಾಯಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದರು.
ಮೇ 19ಕ್ಕೆ ಮುಂದಿನ ವಿಚಾರಣೆ:
ಪ್ರಕರಣದ ವಿಚಾರಣೆ ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಫೈಝಾನ್ ಮೇಲಿನ ಹಲ್ಲೆಯ ಘೋರ ಸ್ವರೂಪ ಮತ್ತು ತೀವ್ರತೆಯನ್ನು ಉಲ್ಲೇಖಿಸಿ, ಅವರ ತಾಯಿ ಕಿಸ್ಮತುನ್ ಇಬ್ಬರು ಪೊಲೀಸರ ವಿರುದ್ಧ ಹೆಚ್ಚುವರಿ ಕೊಲೆ ಆರೋಪ ದಾಖಲಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ಮೇ 19ರಂದು ನಡೆಯಲಿದೆ.

