ಮರುಮೌಲ್ಯಮಾಪನ ಪ್ರಕ್ರಿಯೆಯ ವೇಳೆ ತನ್ನ ಭೌತಶಾಸ್ತ್ರ ಉತ್ತರ ಪತ್ರಿಕೆಯ ಬದಲು ಬೇರೆ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು CBSE ಅಪ್‌ಲೋಡ್ ಮಾಡಿತ್ತು ಎಂದು ವಿದ್ಯಾರ್ಥಿ ವೇದಾಂತ್ ಆರೋಪಿಸಿದ್ದರು.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವೇದಾಂತ್, "CBSE ಈಗ ನನ್ನ ನಿಜವಾದ ಉತ್ತರ ಪತ್ರಿಕೆಯನ್ನು ಕಳುಹಿಸಿದೆ. ಅಧಿಕಾರಿಗಳು ಸಂಜೆ ನಮ್ಮನ್ನು ಸಂಪರ್ಕಿಸಿ ಸರಿಯಾದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ನಾವು ಮಾಡಿದ ಆರೋಪ ಸತ್ಯವಾಗಿತ್ತು. ಉತ್ತರ ಪತ್ರಿಕೆ ನಿಜವಾಗಿಯೂ ಬದಲಾಯಿಸಲಾಗಿತ್ತು" ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗೆ ಕಳುಹಿಸಿದ ಇಮೇಲ್‌ನಲ್ಲಿ CBSE, ಈ ವಿಷಯವನ್ನು ಪರಿಶೀಲಿಸಿರುವುದಾಗಿ ಹಾಗೂ ಅಗತ್ಯ ತಿದ್ದುಪಡಿ ಕ್ರಮ ಆರಂಭಿಸಿರುವುದಾಗಿ ತಿಳಿಸಿದೆ.
"ಪರಿಶೀಲನೆಯ ಬಳಿಕ ನಿಮ್ಮ ಉತ್ತರ ಪುಸ್ತಕದ ಸರಿಯಾದ ಪ್ರತಿಯನ್ನು ನೋಂದಾಯಿತ ಇಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ. ಅಗತ್ಯವಿದ್ದರೆ ಫಲಿತಾಂಶ ನವೀಕರಿಸುವ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ" ಎಂದು ಮಂಡಳಿ ಹೇಳಿದೆ.
ಪರಿಶೀಲನೆ ವೇಳೆ ಅಪ್‌ಲೋಡ್ ಮಾಡಲಾಗಿದ್ದ ಉತ್ತರ ಪತ್ರಿಕೆಯ ಕೈಬರಹ, ಉತ್ತರಗಳ ವಿನ್ಯಾಸ ಮತ್ತು ಒಟ್ಟಾರೆ ಪ್ರಸ್ತುತಿ ತನ್ನ ಬರವಣಿಗೆಯ ಶೈಲಿಗೆ ಹೊಂದಿಕೆಯಾಗುವುದಿಲ್ಲ ಎಂದು ವೇದಾಂತ್ ಆರೋಪಿಸಿದ್ದರು. ಇತರ ವಿಷಯಗಳ ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ನಡೆಸಿದ್ದ ಅವರು, ತನ್ನ ಮೂಲ ಭೌತಶಾಸ್ತ್ರ ಉತ್ತರ ಪತ್ರಿಕೆಯೇ ಮೌಲ್ಯಮಾಪನಕ್ಕೊಳಗಾಗಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು.
ಈ ಘಟನೆ CBSEಯ ಫಲಿತಾಂಶಾನಂತರದ ಕುಂದುಕೊರತೆ ಪರಿಹಾರ ವ್ಯವಸ್ಥೆ ಹಾಗೂ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಇತ್ತೀಚಿನ ದಿನಗಳಲ್ಲಿ ಹಲವು ವಿದ್ಯಾರ್ಥಿಗಳು ಹೊಂದಾಣಿಕೆಯಾಗದ ಅಥವಾ ಮಸುಕಾದ ಉತ್ತರ ಪತ್ರಿಕೆಗಳು, ಮರುಮೌಲ್ಯಮಾಪನ ಅರ್ಜಿ ವೇಳೆ ಪೋರ್ಟಲ್ ದೋಷಗಳು ಹಾಗೂ ಪಾವತಿ ವೈಫಲ್ಯಗಳ ಬಗ್ಗೆ ದೂರು ನೀಡಿದ್ದಾರೆ.

