ಜೈಪುರ: ಶಸ್ತ್ರಚಿಕಿತ್ಸೆಯಾದ ಕೆಲವೇ ಗಂಟೆಗಳಲ್ಲಿ ಗಂಭೀರ ಸಮಸ್ಯೆಗೆ ಸಿಲುಕಿ ಕನಿಷ್ಠ ಐವರು ಗರ್ಭಿಣಿ ಮಹಿಳೆಯರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಹಿಳೆಯರು ಶಸ್ತ್ರಚಿಕಿತ್ಸೆಗೊಳಗಾದ 8 ರಿಂದ 12 ಗಂಟೆಯೊಳಗೆ ದಿಢೀರ್ ರಕ್ತದೊತ್ತಡ ಹಾಗೂ ಪ್ಲೇಟ್ಲೆಟ್ ಸಂಖ್ಯೆಯ ಕುಸಿತಕ್ಕೆ ಗುರಿಯಾಗಿದ್ದು, ಅವರಲ್ಲಿ ಮೂತ್ರಪಿಂಡ ವೈಫಲ್ಯದ ಲಕ್ಷಣಗಳೂ ಕಂಡು ಬಂದಿವೆ ಎಂಬ ಸಂಗತಿ ಪ್ರಾಥಮಿಕ ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ ತೀವ್ರ ರಕ್ತಸ್ರಾವವನ್ನು ನಿಯಂತ್ರಿಸಲು ಬಳಸಲಾಗುವ ಆಕ್ಸಿಟೋಸಿನ್ ಇಂಜೆಕ್ಷನ್ ಗಳು ನಕಲಿಯಾಗಿರುವುದು ಈ ಘಟನೆಗಳಿಗೆ ಕಾರಣ ಎಂದು ಶಂಕಿಸಲಾಗಿದೆ.
ರಾಜಸ್ಥಾನದ ಸರಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿರುವ ಆಕ್ಸಿಟೋಸಿನ್ ಇಂಜೆಕ್ಷನ್ ನ ಒಂದು ಬ್ಯಾಚ್ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲಗೊಂಡಿದ್ದು, ಇದರ ಬೆನ್ನಿಗೇ, ರಾಜ್ಯ ಔಷಧ ನಿಯಂತ್ರಣ ಇಲಾಖೆ ಈ ಬ್ಯಾಚ್ ನ ಆಕ್ಸಿಟೋಸಿನ್ ಇಂಜೆಕ್ಷನ್ ನ ಮಾರಾಟ ಮತ್ತು ಬಳಕೆಯನ್ನು ರಾಜ್ಯಾದ್ಯಂತ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಇಂಜೆಕ್ಷನ್ ಅನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಅದು ನಕಲಿ ಎಂಬ ಸಂಗತಿ ಪತ್ತೆಯಾಗಿದ್ದು, ಈ ಇಂಜೆಕ್ಷನ್ ನಲ್ಲಿ ರಕ್ತವನ್ನು ಹೆಪ್ಪುಗಟ್ಟಿಸಲು ಅಗತ್ಯವಿರುವ ರಾಸಾಯನಿಕವೊಂದರ ಕೊರತೆ ಇತ್ತು ಎಂದು ಹೇಳಲಾಗಿದೆ.
ಅಮೃತಸರದ ಜಾಕ್ಸನ್ ಲ್ಯಾಬೊರೇಟರೀಸ್ ತಯಾರಿಸಿದ್ದ ಇದೇ ಬ್ಯಾಚ್ ನ ಆಕ್ಸಿಟೋಸಿನ್ ಇಂಜೆಕ್ಷನ್ ಅನ್ನು ಕೋಟಾದ ನೂತನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲೂ ಬಳಸಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಿ ಸೆಕ್ಷನ್ ಶಸ್ತ್ರಚಿಕಿತ್ಸೆ ಹಾಗೂ ಗರ್ಭಾಶಯದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹಲವು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆಸ್ಪತ್ರೆಗಳಲ್ಲಿ ವಿಫಲಗೊಂಡಿದ್ದ ಐವಿ ದ್ರಾವಣದ ಬ್ಯಾಚ್ ಗಳನ್ನೂ ತನಿಖಾಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ. ಈ ಸಂಬಂಧ ರಾಜಸ್ಥಾನ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಚಿಕಿತ್ಸೆಗೆ ನೆರವು ನೀಡಲು ಹಾಗೂ ಈ ಸಾವುಗಳ ಸಂಭವನೀಯ ಕಾರಣಗಳ ಕುರಿತು ತನಿಖೆ ನಡೆಸಲು ಜೈಪುರದಲ್ಲಿನ ಎಸ್ಎಂಗಎಸ್ ವೈದ್ಯಕೀಯ ಕಾಲೇಜಿನಿಂದ ತಜ್ಞರ ತಂಡವೊಂದನ್ನು ಕೋಟಾಗೆ ರವಾನಿಸಲಾಗಿದೆ.

