ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇಂದಿನಿಂದ (ಮೇ 10) ನಟ ವಿಜಯ್ ನೇತೃತ್ವದ ತಮಿಳು ವೆಟ್ರಿ ಖಳಗಂ ಪಕ್ಷದ ಸರ್ಕಾರ ಅಧಿಕಾರ ನಡೆಸಲಿದೆ. ವಿಜಯ್ ಅವರ ಜೊತೆ 9 ಮಂದಿ ಶಾಸಕರುಗಳು ಕೂಡ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರಲ್ಲಿ 29 ವರ್ಷದ ಎಸ್. ಕೀರ್ತನಾ ಪ್ರಮುಖ ಆಕರ್ಷಣೆಯಾಗಿದ್ದಾರೆ.
29 ವರ್ಷದ ಎಸ್ ಕೀರ್ತನಾ, ತಮಿಳುನಾಡಿನ ಅತ್ಯಂತ ಕಿರಿಯ ಸಚಿವರುಗಳಲ್ಲಿ ಒಬ್ಬರಾಗಿದ್ದಾರೆ. ಮುಖ್ಯಮಂತ್ರಿ ವಿಜಯ್ ಅವರ ಮೊದಲ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.
ಎಸ್.ಕೀರ್ತನಾ ಯಾರು?
ತಮಿಳು ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿರುವ ಅವರು, 'ಭಾರತದ ಪಟಾಕಿ ರಾಜಧಾನಿ' ಎಂದು ಕರೆಯುವ ಶಿವಕಾಶಿ ಕ್ಷೇತ್ರದಲ್ಲಿ ಸುಮಾರು 7 ದಶಕಗಳ ಪುರುಷರ ಪ್ರಾಬಲ್ಯವನ್ನು ಕೊನೆಗೊಳಿಸುವ ಮೂಲಕ, ಆ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
ವಿರುಧುನಗರ ಜಿಲ್ಲೆಯ ಶಿವಕಾಶಿ ವಿಧಾನಸಭಾ ಕ್ಷೇತ್ರದಿಂದ ಟಿವಿಕೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಕೀರ್ತನಾ ಅವರು ತಮಿಳುನಾಡಿನ ಅತ್ಯಂತ ಕಿರಿಯ ಶಾಸಕಿ ಎಂಬ ದಾಖಲೆ ಬರೆದಿದ್ದಾರೆ.
ಕೀರ್ತನಾ ಅವರು ಚುನಾವಣಾ ಅಖಾಡಕ್ಕೆ ಧುಮುಕುವ ಮುನ್ನ, ರಾಜಕೀಯ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಚುನಾವಣಾ ತಂತ್ರಗಾರಿಕೆ ಮಾಡುವುದು. ಜನಸಾಮಾನ್ಯರ ಜೊತೆ ಸಂಪರ್ಕ ಸಾಧಿಸುವುದರ ಕುರಿತು ಸಲಹೆ ನೀಡುತ್ತಿದ್ದರು.
ಸ್ನಾತಕೋತ್ತರ ಪದವಿ ಪಡೆದಿರುವ ಕೀರ್ತನಾ ಅವರು ಈ ಹಿಂದೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ರಾಜಕೀಯ ಸಲಹೆಗಾರ್ತಿಯಾಗಿ ಕರ್ತವ್ಯ ನಿಭಾಯಿಸಿದ್ದಾರೆ.
ಟಿವಿಕೆ ಪಕ್ಷದ ಜೊತೆ ಆರಂಭಿಕ ದಿನಗಳಿಂದಲೂ ಜೊತೆಯಾಗಿರುವ ಅವರು ಯುವಕರನ್ನು ಪಕ್ಷಕ್ಕೆ ಸೆಳೆಯುವುದು. ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೋಪುರೇಷೆಗಳನ್ನು ಸಿದ್ದಪಡಿಸುವುದು. ಸಾಮಾಜಿಕ ಮಾಧ್ಯಮ ಸಂವಹನ ಸೇರಿದಂತೆ ಪಕ್ಷವನ್ನು ತೆರೆಮರೆಯಲ್ಲಿ ಬಲಪಡಿಸಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಅವರು ಹಿಂದಿಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ತಮಿಳುನಾಡಿನಲ್ಲಿ ಹಿಂದೆ ಭಾಷೆಗೆ ವ್ಯಾಪಕ ವಿರೋಧ ಇರುವುದರ ಹೊರತಾಗಿಯೂ ಅವರು ರಾಷ್ಟ್ರಮಟ್ಟದ ನಾಯಕರಿಗೆ ತಮ್ಮ ಮಾತು ಅರ್ಥವಾಗಬೇಕು ಎಂಬ ಕಾರಣಕ್ಕೆ ಆ ಭಾಷೆಯನ್ನು ಅಯ್ಕೆ ಮಾಡಿಕೊಂಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗಳಿಸುವ ಮೂಲಕ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಬಹುಮತ ಇಲ್ಲದ ಕಾರಣ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಪಡೆದುಕೊಂಡು ಸರ್ಕಾರ ರಚಿಸಿದೆ.

