ನವದೆಹಲಿ: ಆಫ್ರಿಕಾ ಖಂಡದಲ್ಲಿ ಮಾರಣಾಂತಿಕ 'ಎಬೋಲಾ' ವೈರಸ್ ತೀವ್ರವಾಗಿ ಹರಡುತ್ತಿರುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತ ಸರ್ಕಾರವು, ನಾಗರಿಕರಿಗೆ ಆಫ್ರಿಕಾದ ಮೂರು ಪ್ರಮುಖ ದೇಶಗಳಿಗೆ ಪ್ರಯಾಣವನ್ನು ಕೈಗೊಳ್ಳದಂತೆ ಕಟ್ಟುನಿಟ್ಟಿನ ಸಲಹೆ ನೀಡಿದೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ, ಉಗಾಂಡಾ, ದಕ್ಷಿಣ ಸೂಡಾನ್ ದೇಶಗಳಿಗೆ ಪ್ರಯಾಣ ಬೆಳಸದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.
ಭಾರತದಲ್ಲಿ ಸದ್ಯಕ್ಕಿಲ್ಲ ಆತಂಕ
ಈ 'ಬುಂದಿಬುಗ್ಯೋ' ತಳಿಯ ಎಬೋಲಾ ವೈರಸ್‌ನ ಯಾವುದೇ ಪ್ರಕರಣ ಇದುವರೆಗೆ ಭಾರತದಲ್ಲಿ ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳು
ಭಾರತೀಯ ನಾಗರಿಕರ ಸುರಕ್ಷತೆಗಾಗಿ ಸರ್ಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ತೀವ್ರ: ಆಫ್ರಿಕಾದ ಬಾಧಿತ ಪ್ರದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ವಿಮಾನ ನಿಲ್ದಾಣಗಳು ಮತ್ತು ಪ್ರವೇಶ ದ್ವಾರಗಳಲ್ಲಿ ಜ್ವರ ಅಥವಾ ಇತರ ಅನಾರೋಗ್ಯದ ಲಕ್ಷಣಗಳಿರುವವರನ್ನು ಪತ್ತೆಹಚ್ಚಲು ಥರ್ಮಲ್ ಸ್ಕ್ರೀನಿಂಗ್ ಮತ್ತು ಕಠಿಣ ತಪಾಸಣೆಯನ್ನು ಆರಂಭಿಸಲಾಗಿದೆ.
ನಾಗರಿಕರಿಗೆ ಸೂಚನೆ: ಈಗಾಗಲೇ ಆಫ್ರಿಕಾದ ಆ ಭಾಗಗಳಲ್ಲಿ ವಾಸಿಸುತ್ತಿರುವ ಅಥವಾ ಪ್ರವಾಸದಲ್ಲಿರುವ ಭಾರತೀಯರು ಅಲ್ಲಿನ ಸ್ಥಳೀಯ ಆರೋಗ್ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಅತ್ಯಂತ ಜಾಗರೂಕರಾಗಿರಬೇಕು ಎಂದು ತಿಳಿಸಲಾಗಿದೆ.

