ನ್ಯಾಯಾಧೀಶೆ ಸ್ವರಣಾ ಕಾಂತ ಶರ್ಮಾ ಅವರು ವಿವಿಧ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು, ವೀಡಿಯೊಗಳು ಮತ್ತು ಪತ್ರಿಕಾ ಹೇಳಿಕೆಗಳನ್ನು ಪರಿಗಣಿಸಿ ಈ ಆದೇಶ ಹೊರಡಿಸಿದರು.
ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಪರಿಷ್ಕರಣೆ ಅರ್ಜಿಯ ವಿಚಾರಣೆ ನ್ಯಾಯಾಧೀಶೆ ಶರ್ಮಾ ಅವರ ಮುಂದೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಶರ್ಮಾ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಕೆಲ ಆರೋಪಿಗಳು ಅವರನ್ನು ವಿಚಾರಣೆಯಿಂದ ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಕಳೆದ ವಾರ ಆ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು.
ನಂತರ ಕೇಜ್ರಿವಾಲ್ ಮತ್ತು ಸಿಸೋಡಿಯಾ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರ ಮುಂದೆ ನಡೆಯುವ ವಿಚಾರಣೆಯನ್ನು ಬಹಿಷ್ಕರಿಸುವುದಾಗಿ ಪತ್ರ ಬರೆದು, ತಾವು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗುವುದಿಲ್ಲ ಎಂದು ತಿಳಿಸಿದ್ದರು. ಆ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿತ್ತು. ಈ ಬೆಳವಣಿಗೆಗಳ ಬಳಿಕ ಸಂಘಟಿತ ರೀತಿಯಲ್ಲಿ ಸಾಮಾಜಿಕ ಜಾಲತಾಣ ಅಭಿಯಾನ ನಡೆಸಲಾಗಿದೆ ಎಂದು ನ್ಯಾಯಾಲಯವು ಹೇಳಿತು.
'ಸುಪ್ರೀಂ ಕೋರ್ಟ್‌ಗೆ ಹೋಗುವ ಬದಲು ನ್ಯಾಯಾಲಯದ ಆದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮ ವಿಚಾರಣೆ ನಡೆದಿದೆ. ನ್ಯಾಯಾಧೀಶರ ವೀಡಿಯೊವನ್ನು ಆಯ್ದು ಎಡಿಟ್ ಮಾಡಿ ತಪ್ಪು ನಿರೂಪಣೆಯೊಂದಿಗೆ ಪ್ರಸಾರ ಮಾಡಲಾಗಿದೆ. ನ್ಯಾಯಾಧೀಶರು ರಾಜಕೀಯ ನಿರೀಕ್ಷೆಗಳಿಗೆ ಅನುಗುಣವಾಗಿ ನಡೆದುಕೊಳ್ಳದಿದ್ದರೆ ಅವರನ್ನು ದೂಷಿಸಲಾಗುತ್ತದೆ ಎಂಬ ಸಂದೇಶ ರವಾನಿಸಲಾಗಿದೆ. ಅಂತಹ ನಡವಳಿಕೆಯನ್ನು ನಿಯಂತ್ರಿಸದಿದ್ದರೆ ನ್ಯಾಯದಾನವೇ ಬಲಿಪಶುವಾಗುತ್ತದೆ' ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದರು. ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶೆ ಸ್ವರಣಾ ಕಾಂತ ಶರ್ಮಾ, 'ಅವರು ನನ್ನನ್ನು ಬೆದರಿಸಲು ಯತ್ನಿಸಿದರು. ಆದರೆ ನಾನು ಹೆದರುವುದಿಲ್ಲ' ಎಂದು ಹೇಳಿದರು.
ನ್ಯಾಯಾಂಗ ಆದೇಶಗಳ ವಿರುದ್ಧ ನ್ಯಾಯಸಮ್ಮತ ಟೀಕೆ ಮಾಡುವುದು ನಾಗರಿಕರ ಹಕ್ಕು. ಆದರೆ ನ್ಯಾಯಾಲಯದ ಸಮಗ್ರತೆ ಹಾಗೂ ನಿಷ್ಪಕ್ಷಪಾತತೆಯನ್ನು ಕುಗ್ಗಿಸುವ ಪ್ರಯತ್ನ ನ್ಯಾಯಾಂಗ ನಿಂದನೆಗೆ ಸಮಾನವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವಾರಣಾಸಿಯ ವಿಶ್ವವಿದ್ಯಾಲಯದಲ್ಲಿ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ನೀಡಿದ್ದ ಉಪನ್ಯಾಸದ ವೀಡಿಯೊವನ್ನು ಆಯ್ದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ ಎಂದು ನ್ಯಾಯಾಲಯವು ಉಲ್ಲೇಖಿಸಿತು. ಶಿವ ಹಾಗೂ ವಾರಣಾಸಿಗೆ ಸಂಬಂಧಿಸಿದ ಉಲ್ಲೇಖಗಳನ್ನು ರಾಜಕೀಯ ಪಕ್ಷದ ಪರ ಅಭಿಪ್ರಾಯವಾಗಿ ಬಿಂಬಿಸಲಾಗಿದೆ ಎಂದು ನ್ಯಾಯಲಯವು ಹೇಳಿತು.
AAP ನಾಯಕ ಸಂಜಯ್ ಸಿಂಗ್, RSS ಕಾರ್ಯಕ್ರಮಕ್ಕೆ ಹಾಜರಾದ ನ್ಯಾಯಾಧೀಶರಿಂದ ನ್ಯಾಯ ನಿರೀಕ್ಷಿಸಲಾಗುವುದಿಲ್ಲ' ಎಂಬ ಅರ್ಥದ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಈ ಮೂಲಕ ನ್ಯಾಯಾಲಯ ರಾಜಕೀಯ ಸಿದ್ಧಾಂತಕ್ಕೆ ಒಲವು ತೋರುತ್ತಿದೆ ಎಂಬ ಭಾವನೆ ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ನ್ಯಾಯಾಧೀಶೆ ಸ್ವರಣಾ ಕಾಂತ ಶರ್ಮಾ ಉಲ್ಲೇಖಿಸಿದರು.

