ಮೇ 26 ರಂದು ಅಥವಾ ನಾಲ್ಕು ದಿನಗಳ ಮುನ್ನ ಅಥವಾ ನಾಲ್ಕು ದಿನ ತಡವಾಗಿ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ಇಲಾಖೆಯು ಮೇ 15ರಂದು ನೀಡಿತ್ತು.
ಭಾನುವಾರ ಮತ್ತು ಸೋಮವಾರ ಕೇರಳದ ಹಲವು ಪ್ರದೇಶಗಳಲ್ಲಿ ಮಳೆಯಾಗಿರುವುದು ದಾಖಲಾಗಿದ್ದರೂ, ಮುಂಗಾರು ಆರಂಭವಾಗಿದೆ ಎಂದು ಅಧಿಕೃತವಾಗಿ ಘೋಷಿಸಲು ಬೇಕಾದ ಮಾನದಂಡಗಳು ಇನ್ನೂ ನೆರವೇರಿಲ್ಲ.
ಮುಂಗಾರು ಆರಂಭವಾಗಿದೆ ಎಂದು ಘೋಷಿಸಲು ಅನುಸರಿಸುವ ಮಾನದಂಡಗಳು ಹೀಗಿವೆ. ಮೇ 10ರ ನಂತರ, ಮಿನಿಕಾಯ್, ಅಮಿನಿ, ತಿರುವನಂತಪುರಂ, ಪುನಲೂರ್, ಕೊಲ್ಲಂ, ಆಲಪ್ಪುಝ, ಕೊಟ್ಟಾಯಂ, ಕೊಚ್ಚಿ, ತ್ರಿಶೂರ್, ಕಲ್ಲಿಕೋಟೆ, ತಲಶ್ಶೇರಿ, ಕಣ್ಣೂರು, ಕುಡುಲು ಮತ್ತು ಮಂಗಳೂರು ಸೇರಿದಂತೆ 14 ಮಳೆ ದಾಖಲಾತಿ ಕೇಂದ್ರಗಳ ಪೈಕಿ ಶೇಕಡಾ 60ರಷ್ಟು ಕೇಂದ್ರಗಳಲ್ಲಿ ಸತತ ಎರಡು ದಿನಗಳ ಕಾಲ 2.5 ಮಿಲಿಮೀಟರ್ ಅಥವಾ ಹೆಚ್ಚು ಮಳೆ ದಾಖಲಾಗಬೇಕು. ಜೊತೆಗೆ, ಪಶ್ಚಿಮದ ಗಾಳಿಯ ತೀವ್ರತೆ ಮತ್ತು ಮೋಡ ಕವಿದ ವಾತಾವರಣ ಹಾಗೆಯೇ ಮುಂದುವರಿಯಬೇಕು. ಆಗ ಮುಂಗಾರು ಕೇರಳಕ್ಕೆ ಕಾಲಿಟ್ಟಿದೆ ಎಂಬುದಾಗಿ ಎರಡನೇ ದಿನದಂದು ಘೋಷಿಸಲಾಗುವುದು.
ಮುಂದಿನ 2-3 ದಿನಗಳಲ್ಲಿ, ನೈಋತ್ಯ ಮತ್ತು ಆಗ್ನೇಯ ಅರಬ್ಬಿ ಸಮುದ್ರದ ಇನ್ನೂ ಕೆಲವು ಭಾಗಗಳು; ನೈಋತ್ಯ, ಆಗ್ನೇಯ ಮತ್ತು ಪೂರ್ವ-ಮಧ್ಯ ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉಳಿದ ಭಾಗಗಳಿಗೆ ನೈಋತ್ಯ ಮಾರುತವು ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಐಎಂಡಿ ಹೇಳಿದೆ.
ಮುಂದಿನ 2-3 ದಿನಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಹಾಗೂ ಮಂಗಳವಾರ ಕೇರಳ ಮತ್ತು ತಮಿಳುನಾಡಿನಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮುಂದುವರಿಯಲಿರುವ ಬಿಸಿಗಾಳಿ
ಮುಂದಿನ 3-4 ದಿನಗಳಲ್ಲಿ ಮಧ್ಯ ಮತ್ತು ವಾಯುವ್ಯ ಭಾರತದಲ್ಲಿ ತೀವ್ರ ಉಷ್ಣ ಮಾರುತ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಮೇ 29ರಿಂದ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದು, ಬಿಸಿಗಾಳಿಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.

