ಟೆಹ್ರಾನ್: ದಕ್ಷಿಣ ಇರಾನ್ ನಲ್ಲಿರುವ ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಸಮುದ್ರದಲ್ಲಿ ಗಣಿ ಅಳವಡಿಸಲು ಬಳಸಲಾಗುತ್ತಿದ್ದ ಹಡಗುಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಪಡೆಗಳು ದಾಳಿ ನಡೆಸಿವೆ ಎಂದು ಅಮೆರಿಕದ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ. ಈ ದಾಳಿಯನ್ನು 'ಸ್ವಯಂ ರಕ್ಷಣಾತ್ಮಕ ಕ್ರಮ' ಎಂದು ಅಮೆರಿಕ ಹೇಳಿದೆ.
ಈ ದಾಳಿಗೆ ಮುನ್ನ ದಕ್ಷಿಣದ ಬಂದರು ನಗರವಾದ ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟಗಳು ಸಂಭವಿಸಿದ್ದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಸ್ಫೋಟಗಳಿಂದ ಉಂಟಾದ ಹಾನಿಯ ಕುರಿತು ತಕ್ಷಣದ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.
ಈ ಮಧ್ಯೆ, ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಸಂಘರ್ಷವನ್ನು ಕೊನೆಗೊಳಿಸುವ ಸಾಧ್ಯತೆಯ ಒಪ್ಪಂದದ ಕುರಿತು ಚರ್ಚಿಸಲು ಟೆಹ್ರಾನ್ ನ ಉನ್ನತ ಮಟ್ಟದ ಅಧಿಕಾರಿಗಳು ಖತರ್ ಗೆ ತೆರಳಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಖತರ್ ನಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಕದನ ವಿರಾಮ, ಪ್ರಾದೇಶಿಕ ಭದ್ರತೆ, ಕ್ಷಿಪಣಿ ಚಟುವಟಿಕೆಗಳು ಹಾಗೂ ಇರಾನ್ ನ ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯಗಳು ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ಸಂದರ್ಭದಲ್ಲೇ ಅಮೆರಿಕದ ದಾಳಿ ಮತ್ತು ರಾಜತಾಂತ್ರಿಕ ಮಾತುಕತೆಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.

