ನವದೆಹಲಿ: ಭವಿಷ್ಯದಲ್ಲಿ ಇಂಧನ ಪೂರೈಕೆಯಲ್ಲಿ ಆಗಬಹುದಾದ ಅಡಚಣೆಗಳನ್ನು ತಪ್ಪಿಸುವ ಸಲುವಾಗಿ ಮಹತ್ವದ ಹೆಜ್ಜೆ ಇಟ್ಟಿರುವ 'ಕ್ವಾಡ್', ಈ ಸಂಬಂಧ ಹಿಂದೂಮಹಾಸಾಗರ-ಪೆಸಿಫಿಕ್ ಇಂಧನ ಸುರಕ್ಷತೆ ಚೌಕಟ್ಟನ್ನು ಮಂಗಳವಾರ ಘೋಷಿಸಿದೆ.
ತೈಲ ಸಂಗ್ರಹ ಹೆಚ್ಚಿಸುವುದು, ಸುಲಲಿತವಾಗಿ ಇಂಧನ ಪೂರೈಕೆ ಖಾತ್ರಿಪಡಿಸಲು ನೀತಿಗಳನ್ನು ರೂಪಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಸ್ಪಂದನೆಗಾಗಿ ಸದಸ್ಯ ರಾಷ್ಟ್ರಗಳ ನಡುವೆ ಸಮನ್ವಯ ಸಾಧಿಸುವುದಕ್ಕಾಗಿ ವಿಧಾನ ರೂಪಿಸುವಂತಹ ಕ್ರಮಗಳನ್ನು ಈ ಚೌಕಟ್ಟು ಒಳಗೊಂಡಿದೆ.
ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಆರಂಭಿಸಿದ ಬಳಿಕ, ತೈಲ ಹೊತ್ತ ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಸಾಗುವುದಕ್ಕೆ ತೊಂದರೆಯಾಗುತ್ತಿದೆ. ಇದರಿಂದ ವಿಶ್ವದಾದ್ಯಂತ ಇಂಧನ ಬಿಕ್ಕಟ್ಟು ಕಾಣಿಸಿಕೊಂಡಿದೆ. ಜಗತ್ತಿನ ಐದನೇ ಒಂದರಷ್ಟು ತೈಲ ಹಾಗೂ ಎಲ್‌ಎನ್‌ಜಿ ಈ ಜಲಮಾರ್ಗದ ಮೂಲಕವೇ ಸಾಗಣೆಯಾಗುತ್ತದೆ. ಈ ಕಾರಣಕ್ಕೆ ಇಂಧನ ಸುರಕ್ಷತೆ ಕುರಿತ ಚೌಕಟ್ಟಿಗೆ ಮಹತ್ವ ಬಂದಿದೆ.
ಇಲ್ಲಿ ನಡೆದ 'ಕ್ವಾಡ್' ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಈ ಕುರಿತು ಚರ್ಚಿಸಿ, ನಿರ್ಣಯ ಕೈಗೊಳ್ಳಲಾಯಿತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಪಾಲ್ಗೊಂಡಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೈಶಂಕರ್,'ಎಲ್ಲ ದೇಶಗಳು ಆರ್ಥಿಕವಾಗಿ ಮತ್ತೆ ಪುಟಿದೇಳಬೇಕು ಎಂಬುದು ಕ್ವಾಡ್ ರಾಷ್ಟ್ರಗಳ ನಂಬಿಕೆಯಾಗಿದೆ. ಇದಕ್ಕೆ ಉತ್ತೇಜನ ನೀಡುವ ಜೊತೆಗೆ ಸಾಗಾಣಿಕೆ ಸರಪಳಿಯನ್ನು ಬಲಪಡಿಸಬೇಕಿದೆ' ಎಂದು ಹೇಳಿದರು.
'ಇಂಧನ, ರಸಗೊಬ್ಬರ, ನಿರ್ಣಾಯಕ ಖನಿಜಗಳ ಲಭ್ಯತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಎಲ್ಲ ವಿಚಾರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸುವ ಜೊತೆಗೆ ಇತರ ರಾಷ್ಟ್ರಗಳಿಗೂ ನೆರವು ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು' ಎಂದರು.
ಸದಸ್ಯ ರಾಷ್ಟ್ರಗಳ ಒತ್ತಾಯ
* ತೈಲ ಉತ್ಪಾದಿಸುವ ಮತ್ತು ಖರೀದಿಸುವ ದೇಶಗಳು ಇಡೀ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು
* ಇಂಧನ ಮಾರುಕಟ್ಟೆಯಲ್ಲಿ ಏರಿಳಿತ ಹಾಗೂ ಸಮಸ್ಯೆಗಳು ಕಂಡುಬಂದ ಸಂದರ್ಭಗಳಲ್ಲಿ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಇಂಧನ ಲಭ್ಯತೆಯಲ್ಲಿ ಸ್ಥಿರತೆ ಇರುವುದನ್ನು ಖಾತ್ರಿಪಡಿಸಬೇಕು
* ಸುರಕ್ಷಿತ ಸಮುದ್ರಯಾನ ಖಾತ್ರಿಪಡಿಸಬೇಕು. ನಿರ್ಣಾಯಕ ಜಲಮಾರ್ಗಗಳು ಹಾಗೂ ಮೂಲಸೌಕರ್ಯಗಳಿಗೆ ರಕ್ಷಣೆ ಒದಗಿಸಬೇಕು
* ತಂತ್ರಜ್ಞಾನ ನಿರ್ವಹಣೆ ನೀತಿ ನಿರೂಪಣೆ ಅಂತರರಾಷ್ಟ್ರೀಯ ಮಾರುಕಟ್ಟೆ ವಿಶ್ಲೇಷಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ವ್ಯವಸ್ಥೆಯನ್ನು ಒಳಗೊಂಡ 'ಹಿಂದೂಮಹಾಸಾಗರ-ಪೆಸಿಫಿಕ್ ಇಂಧನ ಸುರಕ್ಷತೆ' ಉಪಕ್ರಮ ಜಾರಿಗೆ ಒತ್ತು

