ನವದೆಹಲಿ: ಜಾರ್ಖಂಡ್ ಮತ್ತು ಬಿಹಾರ ಪೊಲೀಸ್ ಇಲಾಖೆಗಳಲ್ಲಿ ಎರಡು ಬೇರೆ ಹೆಸರುಗಳನ್ನು ಬಳಸಿ ಕೆಲಸಕ್ಕೆ ಸೇರಿದ್ದ ಕಾನ್ಸ್ಟೆಬಲ್ ನನ್ನು ಸೇವೆಯಿಂದ ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಲ್ಲದೆ, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲಿಸುವಂತೆ ಎರಡೂ ರಾಜ್ಯಗಳ ಅಧಿಕಾರಿಗಳಿಗೆ ಸೂಚಿಸಿದೆ.
2007ರಲ್ಲಿ ಜಾರ್ಖಂಡ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಎರಡು ದಿನಗಳ ರಜೆ ಪಡೆದು, ನಕಲಿ ಗುರುತಿನ ಚೀಟಿಯಡಿ ಬಿಹಾರ ಪೊಲೀಸ್ ಇಲಾಖೆಗೆ ಸೇರಿದ್ದ ರಂಜನ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ಆದೇಶ ನೀಡಿದೆ. 'ಜಾರ್ಖಂಡ್ ರಾಜ್ಯ ಗಿs ರಂಜನ್ ಕುಮಾರ್' ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠ ನಡೆಸಿತು.
ಜಾರ್ಖಂಡ್ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಆಗಿದ್ದ ರಂಜನ್ ಕುಮಾರ್, ಬಳಿಕ 'ಸಂತೋಷ್ ಕುಮಾರ್' ಎಂಬ ಹೆಸರಿನಲ್ಲಿ ಬಿಹಾರ ಪೊಲೀಸ್ ಇಲಾಖೆಗೆ ಸೇರಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಜಾರ್ಖಂಡ್ ಪೊಲೀಸರು ಕೈಗೊಂಡಿದ್ದ ಶಿಸ್ತು ಕ್ರಮವನ್ನು ರದ್ದುಪಡಿಸಿದ್ದ ಜಾರ್ಖಂಡ್ ಹೈಕೋರ್ಟ್ ನ ವಿಭಾಗೀಯ ಪೀಠದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.
ವಿಭಾಗೀಯ ತನಿಖೆಯಲ್ಲಿ ವಂಚನೆ, ನಕಲಿ ದಾಖಲೆ ಬಳಕೆ, ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಿ ಹಾಗೂ ಸೇವಾ ಶಿಸ್ತಿನ ಉಲ್ಲಂಘನೆ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಹೇಳಿದೆ.
'ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ಪೊಲೀಸ್ ಪಡೆಗಳ ಮೇಲೆ ಉದ್ದೇಶಪೂರ್ವಕ ಹಾಗೂ ಪೂರ್ವಯೋಜಿತ ವಂಚನೆ ನಡೆಸಲಾಗಿದೆ. ಎರಡು ವಿಭಿನ್ನ ಹೆಸರುಗಳಲ್ಲಿ ಸಾರ್ವಜನಿಕ ಉದ್ಯೋಗ ಪಡೆಯಲು ಯತ್ನಿಸಿದ್ದು, ಅದಕ್ಕೆ ನಕಲಿ ಅಥವಾ ತಿರುಚಿದ ದಾಖಲೆಗಳನ್ನು ಬಳಸಲಾಗಿದೆ' ಎಂದು ಪೀಠ ಹೇಳಿದೆ.
ರಂಜನ್ ಕುಮಾರ್ 2005ರ ಮೇ ತಿಂಗಳಲ್ಲಿ ಜಾರ್ಖಂಡ್ ಪೊಲೀಸ್ ಇಲಾಖೆಗೆ ಸೇರಿದ್ದ. ಬಳಿಕ 2007ರ ಡಿಸೆಂಬರ್ ನಲ್ಲಿ ಎರಡು ದಿನಗಳ ರಜೆ ಪಡೆದು, 'ಸಂತೋಷ್ ಕುಮಾರ್' ಹೆಸರಿನಲ್ಲಿ ಬಿಹಾರ ಪೊಲೀಸ್ ಇಲಾಖೆಗೆ ಸೇರಿದ್ದ ಎಂದು ತಿಳಿದು ಬಂದಿದೆ. ಆದರೆ 2008ರ ಜನವರಿಯಲ್ಲಿ ಪಾಟ್ನಾ ಜಿಲ್ಲಾ ಪೊಲೀಸ್ ಕರ್ತವ್ಯ ತೊರೆದು ಗೈರಾಗಿದ್ದನು. ಈ ಬಗ್ಗೆ ನಡೆದ ತನಿಖೆಯಲ್ಲಿ ರಂಜನ್ ಕುಮಾರ್ ಮತ್ತು ಸಂತೋಷ್ ಕುಮಾರ್ ಒಬ್ಬನೇ ವ್ಯಕ್ತಿ ಎಂಬುದು ಪತ್ತೆಯಾಯಿತು.
ಪ್ರಕರಣ ಸುಪ್ರೀಂ ಕೋರ್ಟ್ಗೆ ತಲುಪಿದ ಬಳಿಕ, ನಕಲಿ ಗುರುತಿನ ಆರೋಪದ ಕುರಿತು ತನಿಖೆ ನಡೆಸುವಂತೆ ಬಿಹಾರ ಪೊಲೀಸರಿಗೆ ಸೂಚಿಸಲಾಗಿತ್ತು. ತನಿಖೆಯಲ್ಲಿ ಎರಡೂ ಉದ್ಯೋಗ ಅರ್ಜಿಗಳಲ್ಲಿದ್ದ ಫೊಟೋ ಒಂದೇ ವ್ಯಕ್ತಿಯದ್ದೆಂದು ತಿಳಿದುಬಂದಿದೆ. ಬೆರಳಚ್ಚು, ಬಯೋಮೆಟ್ರಿಕ್ ದಾಖಲೆ ಮತ್ತು ಛಾಯಾಚಿತ್ರಗಳ ವಿಧಿವಿಜ್ಞಾನ ಪರೀಕ್ಷೆಯೂ 'ರಂಜನ್ ಕುಮಾರ್' ಮತ್ತು 'ಸಂತೋಷ್ ಕುಮಾರ್' ಒಬ್ಬನೇ ವ್ಯಕ್ತಿ ಎಂಬುದನ್ನು ದೃಢಪಡಿಸಿತು.
'ವಂಶಾವಳಿ ದಾಖಲೆಗಳು ಮತ್ತು ಮತದಾರರ ಪಟ್ಟಿಯಲ್ಲಿದ್ದ ವ್ಯತ್ಯಾಸಗಳು ಬೇರೆ ವ್ಯಕ್ತಿಗಳಿರುವುದನ್ನು ತೋರಿಸುವುದಕ್ಕಿಂತಲೂ, ಗುರುತನ್ನು ಕೃತಕವಾಗಿ ಸೃಷ್ಟಿಸಿದ ಹಾದಿಯ ಭಾಗವಾಗಿವೆ' ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸಂವಿಧಾನದ 142ನೇ ವಿಧಿಯಡಿ ಅಧಿಕಾರ ಬಳಸಿ, ಕುಮಾರ್ ನನ್ನು ಬಿಹಾರ ಪೊಲೀಸ್ ಸೇವೆಯಿಂದ ವಜಾಗೊಳಿಸುವಂತೆ ನ್ಯಾಯಾಲಯ ಆದೇಶಿಸಿತು.
'ಲಭ್ಯವಿರುವ ಸಾಕ್ಷ್ಯಗಳು ಕೇವಲ ಅನುಮಾನಕ್ಕಷ್ಟೇ ಸೀಮಿತವಾಗಿಲ್ಲ. ಶಿಸ್ತುಬದ್ಧ ಪೊಲೀಸ್ ಪಡೆಗಳಲ್ಲಿ ಎರಡು ರಾಜ್ಯ ಸರ್ಕಾರಗಳಿಂದ ಉದ್ಯೋಗದ ಲಾಭ ಪಡೆಯಲು ಪ್ರತಿವಾದಿ ಉದ್ದೇಶಪೂರ್ವಕವಾಗಿ ವಂಚನೆ ನಡೆಸಿದ್ದಾನೆ ಎಂಬುದು ಸ್ಪಷ್ಟವಾಗಿದೆ' ಎಂದು ಪೀಠ ಹೇಳಿದೆ.
ಸೋಗು ಹಾಕುವಿಕೆ, ನಕಲಿ ದಾಖಲೆ ಬಳಕೆ, ಪೊಲೀಸ್ ಇಲಾಖೆಯಲ್ಲಿ ದ್ವಿ ಉದ್ಯೋಗ ಮತ್ತು ಅನಧಿಕೃತ ಗೈರುಹಾಜರಿ ಆರೋಪಗಳ ಹಿನ್ನೆಲೆಯಲ್ಲಿ, ಇಂತಹ ವ್ಯಕ್ತಿ ಸೇವೆಯಲ್ಲಿ ಮುಂದುವರಿಯುವುದು ಪೊಲೀಸ್ ಪಡೆಯ ವಿಶ್ವಾಸಾರ್ಹತೆ ಹಾಗೂ ಸಾರ್ವಜನಿಕ ನಂಬಿಕೆಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಇದು ಕೇವಲ ಇಲಾಖಾ ಮಟ್ಟದ ಶಿಸ್ತು ಉಲ್ಲಂಘನೆಯ ಪ್ರಕರಣವಲ್ಲ ಎಂದು ಹೇಳಿದ ನ್ಯಾಯಾಲಯ, 'ವಿಧಿವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿರುವ ಆರೋಪಗಳು ವಂಚನೆ, ಸೋಗು ಹಾಕುವಿಕೆ, ನಕಲಿ ದಾಖಲೆಗಳ ಬಳಕೆ ಹಾಗೂ ಸಾರ್ವಜನಿಕ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದಂತಹ ಕ್ರಿಮಿನಲ್ ಅಪರಾಧಗಳ ಲಕ್ಷಣಗಳನ್ನು ಹೊಂದಿವೆ' ಎಂದು ತಿಳಿಸಿದೆ.
ಈ ಕಾರಣದಿಂದ ಪ್ರಕರಣದ ಕ್ರಿಮಿನಲ್ ಅಂಶಗಳ ಕುರಿತು ಪರಿಶೀಲನೆ ನಡೆಸಿ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಹಾರ ಮತ್ತು ಜಾರ್ಖಂಡ್ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
'ಪೊಲೀಸ್ ಸೇವೆಯಂತಹ ಸಾರ್ವಜನಿಕ ಉದ್ಯೋಗವನ್ನು ವಂಚನೆಗಾಗಿ ಬಳಸಲು ಅವಕಾಶ ನೀಡಲಾಗುವುದಿಲ್ಲ. ಕಾನೂನು ಜಾರಿಗೆ ಜವಾಬ್ದಾರರಾಗಿರುವವರೇ ವಂಚನೆ ಮತ್ತು ನಕಲಿ ದಾಖಲೆಗಳ ಆಧಾರದಲ್ಲಿ ಸೇವೆಗೆ ಸೇರಿದರೆ, ಅದು ಕಾನೂನಿನ ಆಡಳಿತದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ' ಎಂದು ನ್ಯಾಯಾಲಯ ಹೇಳಿದೆ.

