ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್‌ಗೆ ಫೆಡರೇಶನ್ 15 ಪುಟಗಳ ಶೋಕಾಸ್ ನೋಟಿಸ್ ನೀಡಿತ್ತು.
ಅವರು ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ ಹಾಗೂ ಉದ್ದೀಪನ ದ್ಯವ್ಯ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ನೋಟಿಸ್‌ನಲ್ಲಿ ಫೆಡರೇಶನ್ ಆರೋಪಿಸಿತ್ತು. ಅದೂ ಅಲ್ಲದೆ, ಅವರು ಜೂನ್ 26ರವರೆಗೆ ದೇಶಿ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ ಎಂದು ಹೇಳಿತ್ತು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಬಳಿಕ ಅವರು ಕ್ರೀಡೆಯಿಂದ ದೂರ ಸರಿದಿದ್ದರು. ಈಗ ಉತ್ತರಪ್ರದೇಶದ ಗೊಂಡದಲ್ಲಿರುವ ನಂದಿನಿನಗರ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಸೀನಿಯರ್ ಓಪನ್ ರ್ಯಾಂಕಿಂಗ್ ಪಂದ್ಯಾವಳಿಯಲ್ಲಿ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಫೋಗಟ್ ಮುಂದಾಗಿದ್ದರು. ಆದರೆ ಸ್ಪರ್ಧಾತ್ಮಕ ಕುಸ್ತಿಗೆ ಮರಳುವ ಫೋಗಟ್‌ರ ಪ್ರಯತ್ನವನ್ನು ಕುಸ್ತಿ ಫೆಡರೇಶನ್ ವಿಫಲಗೊಳಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ, 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಫೋಗಟ್ ಸ್ಪರ್ಧೆಯ ಎರಡನೇ ದಿನ ತನ್ನ ತೂಕವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ತನ್ನ ಶೋಕಾಸ್ ನೋಟಿಸ್‌ನಲ್ಲಿ ಫೆಡರೇಶನ್ ಹೇಳಿದೆ.
ನೋಟಿಸ್‌ನಲ್ಲಿ ಪ್ರಸ್ತಾವಿಸಲಾಗಿರುವ ಎಲ್ಲಾ ವಿಷಯಗಳಿಗೆ ಮುಂದಿನ 14 ದಿನಗಳಲ್ಲಿ ನನ್ನ ಕಾನೂನು ತಂಡ ಮತ್ತು ಸಲಹೆಗಾರರೊಂದಿಗೆ ಸಮಾಲೋಚಿಸಿ ವಿವರವಾದ ಉತ್ತರವನ್ನು ನೀಡುವುದಾಗಿ 31 ವರ್ಷದ ಹರ್ಯಾಣ ಕುಸ್ತಿಪಟು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್‌ನಲ್ಲಿ ಅಧಿಕಾರದಲ್ಲಿರುವವರು ನಾನು ಕ್ರೀಡೆಯಿಂದ ಹೊರಹೋಗಬೇಕೆಂದು ಬಯಸುತ್ತಿದ್ದಾರೆ ಎಂದು ಕುಸ್ತಿ ಪಟು ವಿನೇಶ್ ಫೋಗಟ್ ಸೋಮವಾರ ಆರೋಪಿಸಿದ್ದಾರೆ. ಆದರೆ, ನಾನು ಸೋಲು ಒಪ್ಪಿಕೊಳ್ಳುವುದಿಲ್ಲ ಹಾಗೂ ಕುತಂತ್ರ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
''ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ? ನಾನು ಸನ್ಯಾಸ ತೆಗೆದುಕೊಂಡು ದೂರ ಹೋಗಬೇಕೆಂದು ನೀವು ಬಯಸುತ್ತೀರಾ? ಸೋಲೊಪ್ಪಿಕೊಳ್ಳಬೇಕೆಂದು ಬಯಸುತ್ತೀರಾ? ನನ್ನ ವಿರುದ್ಧ ಅವರು ಹೂಡಿರುವ ಷಡ್ಯಂತ್ರ ಯಶಸ್ವಿಯಾಗಬೇಕೆಂದು ಬಯಸುತ್ತೀರಾ? ನಾನು ಕುಸ್ತಿ ತೊರೆಯಬೇಕೆಂದು ಅವರು ಬಯಸುತ್ತಿದ್ದಾರೆ. ನಾನು ಬಳಲಬೇಕು ಮತ್ತು ಕ್ರೀಡೆಯನ್ನು ತೊರೆಯಬೇಕು ಎನ್ನುವುದು ಅವರ ಯೋಚನೆ. ಸಂಜಯ್ ಸಿಂಗ್ (ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ), ಬ್ರಿಜ್ ಭೂಷಣ್ ಸಿಂಗ್ (ಮಾಜಿ ಅಧ್ಯಕ್ಷ), ಅವರ ತಂಡ ಹಾಗೂ ನಿಯಂತ್ರಣ ಮತ್ತು ಅಧಿಕಾರ ಹೊಂದಿರುವ ಎಲ್ಲರೂ ಈ ಯೋಚನೆಯಲ್ಲಿದ್ದಾರೆ'' ಎಂದು ಕುಸ್ತಿ ಫೆಡರೇಶನ್ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫೋಗಟ್ ಆರೋಪಿಸಿದರು.

