ವಾಷಿಂಗ್ಟನ್: 'ಚೀನಾ ಪ್ರವಾಸವನ್ನು ತುಂಬಾ ಕಾತರದಿಂದ ಎದುರು ನೋಡುತ್ತಿದ್ದೇನೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ಬಹುನಿರೀಕ್ಷಿತ ಮಾತುಕತೆ ಬಗ್ಗೆಯೂ ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, 'ಉಭಯ ರಾಷ್ಟ್ರಗಳಿಗೂ ಮಹಾನ್ ವಿಚಾರಗಳು ಸಂಭವಿಸಲಿದೆ' ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
'ಚೀನಾ ಮಹಾನ್ ದೇಶ ಹಾಗೂ ಷಿ ಜಿನ್‌ಪಿಂಗ್ ಅದ್ಭುತ ನಾಯಕ' ಎಂದು ಟ್ರಂಪ್ ಬಣ್ಣಿಸಿದ್ದಾರೆ.

ಟ್ರಂಪ್ ಪೋಸ್ಟ್
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೇ ಮೇ 13ರಿಂದ 15ರವರೆಗೆ ಚೀನಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿಯೇ ಅಮೆರಿಕ ಅಧ್ಯಕ್ಷರೊಬ್ಬರು ಚೀನಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.
ಉಭಯ ನಾಯಕರ ಮಧ್ಯೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಅಮೆರಿಕ ಹಾಗೂ ಇಸ್ರೇಲ್ ಇರಾನ್ ಮೇಲೆ ಜಂಟಿಯಾಗಿ ದಾಳಿ ನಡೆಸಿದ ಕಾರಣ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷ, ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ನಿರ್ಬಂಧದಿಂದ ಜಾಗತಿಕ ಮಟ್ಟದಲ್ಲಿ ಉಲ್ಬಣಗೊಂಡಿರುವ ಇಂಧನ ಬಿಕ್ಕಟ್ಟು, ತೈವಾನ್ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಚೀನಾ-ಅಮೆರಿಕ ನಡುವಿನ ಉದ್ವಿಗ್ನತೆ ನಡುವೆ ಉಭಯ ನಾಯಕರ ಭೇಟಿಯು ಮಹತ್ವ ಪಡೆದುಕೊಂಡಿದೆ.

