ಆದರೆ, ಪಶ್ಚಿಮ ಏಷ್ಯಾ ಸಂಘರ್ಷವನ್ನು ಅಂತ್ಯಗೊಳಿಸಲು ಇರಾನ್ ಕಳೆದ ವಾರದ ಸಲ್ಲಿಸಿದ್ದ ಹೊಸ ಪ್ರಸ್ತಾವ ತೃಪ್ತಿ ತಂದಿಲ್ಲ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಣ್ವಸ್ತ್ರ ಯೋಜನೆಯನ್ನು ಕೈಬಿಡುವ ಖಾತರಿ ನೀಡದ ಹೊರತು ಯಾವುದೇ ಪ್ರಸ್ತಾವವನ್ನು ಅಮೆರಿಕ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎನ್ನುವ ಸುಳಿವು ನೀಡಿದ್ದರು.
ಇರಾನ್‌ನ ಈ ಹೊಸ ಪ್ರಸ್ತಾವವು ಉದ್ವಿಗ್ನ ಪರಿಸ್ಥಿತಿಯನ್ನು ಹಂತ-ಹಂತವಾಗಿ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಇದು ತಕ್ಷಣದ ಸಂಘರ್ಷ ನಿರ್ವಹಣೆಯನ್ನು ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಕುರಿತ ಹಳೆಯ ಹಾಗೂ ಸಂಕೀರ್ಣವಾದ ವಿವಾದದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ಪ್ರಸ್ತಾವವು ಮೂರು ಅಂಶಗಳನ್ನು ಒಳಗೊಂಡಿದೆ. ಮೊದಲನೇ ಅಂಶವು ಸಂಘರ್ಷವನ್ನು ಕಡಿಮೆ ಮಾಡುವ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಹೊರ್ಮುಜ್ ಜಲಸಂಧಿ ಹಾಗೂ ಅದರ ಸುತ್ತಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ.
ಆದರೆ, ಇದಕ್ಕೆ ಪ್ರತಿಯಾಗಿ ಅಮೆರಿಕ ತನ್ನ ಸೇನಾ ನಿಯೋಜನೆಯನ್ನು ಕಡಿಮೆ ಮಾಡಬೇಕು. ಇರಾನ್ ತೈಲ ರಫ್ತಿನ ಮೇಲಿನ ನಿರ್ಬಂಧವನ್ನು ರದ್ದುಪಡಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಎರಡನೇ ಅಂಶವು, ಸಮುದ್ರ ಮಾರ್ಗದ ಮೂಲಕ ನಡೆಯುತ್ತಿದ್ದ ತೈಲ ಸಾಗಣೆಯ ಮರು ಸ್ಥಾಪನೆಯನ್ನು ಅಣ್ವಸ್ತ್ರ ಮಾತುಕತೆಗಳಿಂದ ಪ್ರತ್ಯೇಕಿಸುವುದನ್ನು ಪ್ರಸ್ತಾಪಿಸುತ್ತದೆ. ಅಂದರೆ, ಅಣ್ವಸ್ತ್ರ ಚಟುವಟಿಕೆಗಳ ಬಗ್ಗೆ ಯಾವುದೇ ಭರವಸೆ ನೀಡುವುದಕ್ಕೂ ಮೊದಲು ಆರ್ಥಿಕ ವ್ಯವಹಾರಗಳು ನಡೆಯಬೇಕು ಎಂದು ಇರಾನ್ ವಾದಿಸುತ್ತಿದೆ.
ಮೂರನೇ ಅಂಶವು, ಅಣ್ವಸ್ತ್ರ ತಯಾರಿಕೆ ಕುರಿತ ಷರತ್ತುಬದ್ಧ ಬದಲಾವಣೆಗಳಿಗೆ ಸಂಬಂಧಿಸಿದೆ. ಶಾಂತಿಯುತ ಪರಮಾಣು ಶಕ್ತಿಯ ಹಕ್ಕನ್ನು ಪ್ರತಿಪಾದಿಸುತ್ತಲೇ, ಯುರೇನಿಯಂ ಸಮೃದ್ಧೀಕರಣದ ಮಿತಿಗಳು ಹಾಗೂ ಸುಧಾರಿತ ಮೇಲ್ವಿಚಾರಣಾ ಕಾರ್ಯ ವಿಧಾನಗಳ ಬಗ್ಗೆ ಚರ್ಚಿಸಲು ಇರಾನ್ ಮುಕ್ತ ಮನಸ್ಸು ತೋರಿಸಿದೆ. ಆದರೆ, ಇದು ನಿರ್ಬಂಧಗಳ ಸಡಿಲಿಕೆಯನ್ನು ಖಾತರಿಪಡಿಸುವ ವಿಶಾಲ ಒಪ್ಪಂದದ ವ್ಯಾಪ್ತಿಯಲ್ಲಿ ಮಾತ್ರ ಇರಬೇಕು ಎಂದು ಇರಾನ್ ಹೇಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ನಿಯಮಗಳ ಅಡಿಯಲ್ಲಿ ನಾಗರಿಕ ಬಳಕೆಗಾಗಿ ಪರಮಾಣು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ತನ್ನ ಹಕ್ಕಿಗೆ ಅಧಿಕೃತ ಮಾನ್ಯತೆಯನ್ನು ಇರಾನ್ ಬಯಸುತ್ತಿದೆ ಎಂದು ಮತ್ತೊಂದು ಮೂಲ ತಿಳಿಸಿದೆ.
ಇದರ ಜೊತೆಗೆ, ಈ ವಿಷಯದ ಕುರಿತು ಆಗುವ ಯಾವುದೇ ಒಪ್ಪಂದವು ದೀರ್ಘಕಾಲ ಇರಬೇಕು. ಯಾವುದೇ ದೇಶವು ಏಕಪಕ್ಷೀಯವಾಗಿ ಆ ಒಪ್ಪಂದದಿಂದ ಹಿಂದೆ ಸರಿಯುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ಇರಾನ್ ಬಯಸುತ್ತಿದೆ.
ಇರಾನ್ ಅನುಚಿತವಾಗಿ ವರ್ತಿಸಿದರೆ ಮತ್ತೆ ದಾಳಿ: ಟ್ರಂಪ್
ವಾಷಿಂಗ್ಟನ್: 'ಯುದ್ಧವನ್ನು ಅಂತ್ಯಗೊಳಿಸಲು ಇರಾನ್ ಮುಂದಿಟ್ಟಿರುವ ಹೊಸ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ಇರಾನ್ ಅನುಚಿತವಾಗಿ ವರ್ತಿಸಿದರೆ ಅದರ ವಿರುದ್ಧ ಸೇನಾ ದಾಳಿ ಮತ್ತೆ ಆರಂಭವಾಗಬಹುದು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಪಾಮ್ ಬೀಚ್‌ನಿಂದ ಮಿಯಾಮಿಗೆ ಹೋಗುವ ಮಾರ್ಗಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಇರಾನ್ ಜತೆಗೆ ಒಪ್ಪಂದಕ್ಕೆ ಬರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 'ಇರಾನ್ ಕಳೆದ 47 ವರ್ಷಗಳಲ್ಲಿ ಮಾನವಕುಲಕ್ಕೆ ಮತ್ತು ಜಗತ್ತಿಗೆ ಮಾಡಿದ ಹಾನಿಗೆ ಇನ್ನೂ ಸರಿಯಾದ ಬೆಲೆ ತೆತ್ತಿಲ್ಲ' ಎಂದು ಹೇಳಿದ್ದಾರೆ. 'ಇರಾನ್ ತಪ್ಪಾಗಿ ವರ್ತಿಸಿದರೆ ಏನಾದರೂ ಕೆಟ್ಟದ್ದನ್ನು ಮಾಡಿದರೆ ಖಂಡಿತವಾಗಿ ದಾಳಿ ನಡೆಸುವ ಸಾಧ್ಯತೆ ಇದೆ' ಎಂದು ಎಚ್ಚರಿಕೆ ನೀಡಿದ್ದಾರೆ.

