ತಿರುವನಂತಪುರ: ಕೊಚ್ಚಿನ್ ಮಿನರಲ್ಸ್ ಆಯಂಡ್ ರೂಟೈಲ್ ಲಿಮಿಟೆಡ್ನ (ಸಿಎಂಆರ್ಎಲ್) ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸದ ಮೇಲೆ ಬುಧವಾರ ದಾಳಿಗೆ ಮುಂದಾದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ವಾಹನಕ್ಕೆ ಮುತ್ತಿಗೆ ಹಾಕಿದ ಸಿಪಿಎಂ ಕಾರ್ಯಕರ್ತರು, ಬಾಟಲಿ, ಕಲ್ಲುಗಳನ್ನು ಎಸೆದು ಭಾರಿ ದಾಂಧಲೆ ನಡೆಸಿದ್ದಾರೆ.
ಸಿಪಿಎಂ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಇ.ಡಿ ತಂಡದ ಮೂರು ಕಾರುಗಳ ಗಾಜುಗಳು ಪುಡಿಯಾಗಿವೆ. ಒಂದು ಕಾರಿನಲ್ಲಿದ್ದ ಚಾಲಕನಿಗೆ ಗಾಯವಾಗಿದೆ. ನಿವಾಸದ ಹೊರಗೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಂದ ಹೆಲ್ಮೆಟ್ ಕಸಿದುಕೊಂಡ ಕಾರ್ಯಕರ್ತರು, ಅದನ್ನು ಬಳಸಿ ಇ.ಡಿ ತಂಡದ ಭದ್ರತೆಗೆ ನಿವಾಸದ ಆವರಣದಲ್ಲಿ ನಿಂತಿದ್ದ ಸಿಆರ್ಪಿಎಫ್ ಯೋಧನ ಮೇಲೂ ಹಲ್ಲೆ ನಡೆಸಿದ್ದಾರೆ.
ಸಿಎಂಆರ್ಎಲ್ ಕಂಪನಿಯು ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ವಿಜಯನ್ ಮಾಲೀಕತ್ವದ ಐ.ಟಿ ಕಂಪನಿಗೆ, ಯಾವುದೇ ಸೇವೆ ಪಡೆಯದೆ ಕೋಟ್ಯಂತರ ರೂಪಾಯಿ ವರ್ಗಾಯಿಸಿರುವ ಆರೋಪವನ್ನು ಎದುರಿಸುತ್ತಿದೆ. ಇದರ ತನಿಖೆಗಾಗಿ ಇ.ಡಿ ಅಧಿಕಾರಿಗಳು ಇಲ್ಲಿನ ಬೇಕರಿ ಜಂಕ್ಷನ್ನಲ್ಲಿರುವ ಪಿಣರಾಯಿ ಅವರ ಬಾಡಿಗೆ ಮನೆಗೆ ಬಂದಿದ್ದರು. ಸಿಪಿಎಂ ಕಾರ್ಯಕರ್ತರಿಂದ ತುಂಬಿದ್ದ ಪಿಣರಾಯಿ ನಿವಾಸದ ಆವರಣವು ಕ್ಷಣ ಮಾತ್ರದಲ್ಲಿ ಸಮರ ಕಣವಾಗಿ ಬದಲಾಯಿತು.
ಏಕಕಾಲದಲ್ಲಿ ದಾಳಿ: ಕಣ್ಣೂರಿನಲ್ಲಿರುವ ಪಿಣರಾಯಿ ಅವರ ನಿವಾಸ, ಕೋಯಿಕ್ಕೋಡ್ನಲ್ಲಿರುವ ಪಿಣರಾಯಿ ಅವರ ಅಳಿಯ, ಮಾಜಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರ ನಿವಾಸ ಸೇರಿ, ತಿರುವನಂತಪುರ, ಎರ್ನಾಕುಳಂ, ಬೆಂಗಳೂರು ಸೇರಿದಂತೆ 10 ಕಡೆಗಳಲ್ಲಿ ಪಿಣರಾಯಿ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಇ.ಡಿ ಬುಧವಾರ ಬೆಳಿಗ್ಗೆ 7 ಗಂಟೆಗೆ ಏಕಕಾಲದಲ್ಲಿ ದಾಳಿ ನಡೆಸಿತು.
ಎಲ್ಲ ಕಡೆ ಭದ್ರತೆಗಾಗಿ ಶಸ್ತ್ರಸಜ್ಜಿತ ಸಿಬ್ಬಂದಿ ನಿಯೋಜಿಸಲಾಗಿತ್ತು. ತಿರುವನಂತಪುರದ ಬೇಕರಿ ಜಂಕ್ಷನ್ನಲ್ಲಿರುವ ಮನೆಗೆ ಇ.ಡಿ ತಂಡ ಬಂದಾಗ, ಪಿಣರಾಯಿ ಮತ್ತು ಅವರ ಕುಟುಂಬ ಸದಸ್ಯರು ಒಳಗಿದ್ದರು. ಸಿಪಿಎಂ ಕಾರ್ಯಕರ್ತರು ದಾಂಧಲೆ ನಡೆಸಿದ ಬೆನ್ನಲ್ಲೇ, ಶೋಧ ಕಾರ್ಯ ಕೈಗೊಳ್ಳದೆ ಇ.ಡಿ ತಂಡ ಮರಳಿತು. ದಾಂಧಲೆ ಬಗ್ಗೆ ಪೊಲೀಸರಿಗೆ ಇ.ಡಿ ದೂರು ನೀಡಿದೆ ಎಂದು ಮೂಲಗಳು ತಿಳಿಸಿವೆ.
ತಿರುವನಂತಪುರದರುವ ಪಿಣರಾಯಿ ವಿಜಯನ್ ಅವರ ನಿವಾಸಕ್ಕೆ ಬುಧವಾರ ತನಿಖೆಗೆ ಬಂದ ಇ.ಡಿ ಅಧಿಕಾರಿಗಳ ಕಾರಿಗೆ ಸಿಪಿಎಂ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು - ಪಿಟಿಐ ಚಿತ್ರ -ಪಿಣರಾಯಿ ವಿಜಯನ್, ಸಿಪಿಎಂ ಮುಖಂಡಇ.ಡಿ ದಾಳಿಯಿಂದ ನನ್ನನ್ನು ಅಥವಾ ಸಿಪಿಎಂ ಅನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಯಾರೂ ಅಂತಹ ಭ್ರಮೆಗಳನ್ನು ಇಟ್ಟುಕೊಳ್ಳಬಾರದು -ರಾಜೀವ್ ಚಂದ್ರಶೇಖರ್, ಬಿಜೆಪಿಯ ಕೇರಳಂ ರಾಜ್ಯ ಘಟಕದ ಅಧ್ಯಕ್ಷಹಿಂಸಾಚಾರವೇ ಭ್ರಷ್ಟರ ಕೊನೆಯ ಆಶ್ರಯ ತಾಣ. ಪಿಣರಾಯಿ ನಿವಾಸದ ಎದುರು ಸಿಪಿಎಂ ನಡೆಸಿದ ದಾಂಧಲೆಯು ಕಾನೂನು ಸುವ್ಯವಸ್ಥೆ ಮೇಲಿನ ದಾಳಿಯಾಗಿದೆ
ಇ.ಡಿ ತನಿಖೆ ಏನು?
ಸಿಎಂಆರ್ಎಲ್ ಕಂಪನಿಯಿಂದ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರ ಒಡೆತನದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಸಂಸ್ಥೆಗೆ 2018 ಮತ್ತು 2019ರಲ್ಲಿ ಒಟ್ಟು ₹2.78 ಕೋಟಿ ಹಣವು ಅಕ್ರಮವಾಗಿ ವರ್ಗಾವಣೆ ಆಗಿದೆ ಎಂಬ ದೂರಿನ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಇ.ಡಿ ತನಿಖೆಯನ್ನು ರದ್ದುಮಾಡುವಂತೆ ಕೋರಿ ಸಿಎಂಆರ್ಎಲ್ ಕಂಪನಿ ಸಲ್ಲಿಸಿದ್ದ ಮನವಿಯನ್ನು ಕೇರಳಂ ಹೈಕೋರ್ಟ್ ಮಂಗಳವಾರ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇ.ಡಿ ದಾಳಿ ನಡೆಸಿದೆ.
ಸಿಪಿಎಂ ಪ್ರತಿಭಟನೆ
ಕಣ್ಣೂರಿನಲ್ಲಿ ಪಿಣರಾಯಿ ವಿಜಯನ್ ಅವರ ನಿವಾಸದ ಎದುರು ಜಮಾಯಿಸಿದ ಸಿಪಿಎಂ ಕಾರ್ಯಕರ್ತರು ಇ.ಡಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರದ ಬಿಜೆಪಿ ಸರ್ಕಾರ ಕೇರಳಂನ ಸಿಪಿಎಂ ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇ.ಡಿಯನ್ನು ರಾಜಕೀಯ ಪ್ರೇರಿತ ದಾಳಿಗಳಿಗೆ ಬಳಸಿಕೊಳ್ಳುತ್ತಿದೆ' ಎಂದು ದೂರಿದರು.
ದೆಹಲಿಯಲ್ಲಿ ಇ.ಡಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ ಬೇಬಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.
'ಸಿಪಿಎಂ ಮುಖಂಡರ ಮೇಲಿನ ಇ.ಡಿ ದಾಳಿಯು ಕೇಂದ್ರದ ಬಿಜೆಪಿ ಸರ್ಕಾರದ ಹೇಯ ಕೃತ್ಯ' ಎಂದು ಆರೋಪಿಸಿದ ಬೇಬಿ 'ಇದೊಂದು ರಾಜಕೀಯ ಪ್ರೇರಿತ ದಾಳಿ ಎನ್ನುವುದನ್ನು ಸಿಪಿಎಂ ಜನರ ಎದುರು ಸಾಬೀತುಪಡಿಸಲಿದೆ' ಎಂದರು.
ಕೇರಳಂನ ಹೊಸ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರ ಸಂಪುಟದಲ್ಲಿರುವ ಇಬ್ಬರು ಸಚಿವರು ಸಹ ಸಿಎಂಆರ್ಎಲ್ ಕಂಪನಿಯಿಂದ ಹಣ ಪಡೆದಿದ್ದು ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

