ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯ ನಿರ್ಧಾರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೇರಳ ಉಸ್ತುವಾರಿ ದೀಪಾ ದಾಸ್‌ಮುನ್ಷಿ ಭಾನುವಾರ ಹೇಳಿದ್ದಾರೆ.
ಮಾತನಾಡಿದ ದಾಸ್‌ಮುನ್ಷಿ , 'ಈ ವಿಷಯದ ಬಗ್ಗೆ ಮೈತ್ರಿಕೂಟದ ಪಕ್ಷಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅವರು ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಲು ಒಪ್ಪಿದ್ದಾರೆ' ಎಂದು ಹೇಳಿದ್ದಾರೆ.
'ಮಿತ್ರಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಕಾಂಗ್ರೆಸ್ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದನ್ನು ಒಪ್ಪುತ್ತೇವೆಂದು ಅವರುಸ್ಪಷ್ಟವಾಗಿ ಹೇಳಿದ್ದಾರೆ' ಎಂದು ಅವರು ಹೇಳಿದರು.
'ಕಾಂಗ್ರೆಸ್ ಪಕ್ಷ ಮತ್ತು ಮಿತ್ರಪಕ್ಷಗಳಲ್ಲಿ, ಎಲ್ಲರಿಗೂ ಒಂದು ಕಾರ್ಯವಿಧಾನವಿದೆ. ಫಲಿತಾಂಶ ಪ್ರಕಟವಾದ ನಂತರ, ಪಕ್ಷವು ತನ್ನ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಚುನಾಯಿತ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ' ಎಂದು ಅವರು ಹೇಳಿದರು.
ಯುಡಿಎಫ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಪಕ್ಷದೊಳಗಿನ ಚರ್ಚೆಗಳಿಗಿಂತ, ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಜೋರಾಗಿ ಚರ್ಚೆ ನಡೆಯುತ್ತಿದೆ' ಎಂದು ದಾಸ್‌ಮುನ್ಷಿ ಹೇಳಿದರು. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕೇರಳ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕರಾದ ವಿ.ಡಿ ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿವೆ.
140 ಸದಸ್ಯ ಬಲದ ಕೇರಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 9 ರಂದು ನಡೆದಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

