ಕೋಲ್ಕತ್ತ: ವಿದ್ಯುನ್ಮಾನ ಮತಯಂತ್ರಗಳ ( ಇವಿಎಂ) ದುರ್ಬಳಕೆಯ ಯತ್ನದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ ಬಳಿಕ ಮತ ಎಣಿಕೆ ಕೇಂದ್ರಗಳ ಸುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದ ಸಖಾವತ್ ಮೆಮೊರಿಯಲ್ ಸರ್ಕಾರಿ ಬಾಲಕಿಯರ ಶಾಲೆಯಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಖುದ್ದಾಗಿ ಗುರುವಾರ ರಾತ್ರಿ ತೆರಳಿದ್ದರು.
ಸುಮಾರು ನಾಲ್ಕು ಗಂಟೆ ಮತ ಎಣಿಕೆ ಕೇಂದ್ರದಲ್ಲಿದ್ದುಕೊಂಡು ಪರಿಶೀಲನೆ ನಡೆಸಿದ್ದರು. ನಂತರ, ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಅಲ್ಲಿಂದ ನಿರ್ಗಮಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, 'ಅಭ್ಯರ್ಥಿ ಅಥವಾ ಒಬ್ಬ ಏಜೆಂಟ್ ಮಾತ್ರ ಭದ್ರತಾ ಕೊಠಡಿಯ (ಸ್ಟ್ರಾಂಗ್ ರೂಮ್) ಒಳಗೆ ಬರಬಹುದು. ಮೊದಲಿಗೆ ಕೇಂದ್ರೀಯ ಪಡೆಗಳು ಪ್ರವೇಶಕ್ಕೆ ನನಗೆ ಅನುಮತಿ ನೀಡಿರಲಿಲ್ಲ' ಎಂದು ತಿಳಿಸಿದರು.
'ಪಾರದರ್ಶಕತೆ ಕಾಪಾಡುವುದು ಅಗತ್ಯ. ಜನರ ಮತವನ್ನು ರಕ್ಷಣೆ ಮಾಡಬೇಕು. ದೂರುಗಳನ್ನು ಸ್ವೀಕರಿಸಿದ ಬಳಿಕ ಇಲ್ಲಿ ಧಾವಿಸಿದ್ದೆ. ಇವಿಎಂ ದುರ್ಬಳಕೆ ಸಂಚು ರೂಪಿಸಿದ್ದರೆ, ಅದನ್ನು ಸಹಿಸುವುದಿಲ್ಲ' ಎಂದು ಎಚ್ಚರಿಕೆ ನೀಡಿದರು. ಭದ್ರತಾ ಸಿಬ್ಬಂದಿ ಈ ಪ್ರದೇಶದಲ್ಲಿ ನಿಗಾ ಇಟ್ಟಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಅವರು ಸ್ಥಳದಿಂದ ನಿರ್ಗಮಿಸಿದರು.
ಇದಕ್ಕೂ ಮುನ್ನ ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದ ಬ್ಯಾನರ್ಜಿ ಅವರು, 'ಸ್ಟ್ರಾಂಗ್ ರೂಮ್‌ಗಳಲ್ಲಿ 24 ತಾಸು ನಿಗಾ ವಹಿಸಿ' ಎಂದು ಕಾರ್ಯಕರ್ತರು ಮತ್ತು ಏಜೆಂಟ್‌ಗಳಿಗೆ ಕರೆ ನೀಡಿದ್ದರು.
ಈ ಮಧ್ಯೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು, 'ನಿರ್ಗಮಿತ ಮುಖ್ಯಮಂತ್ರಿ ಮತ್ತು ಟಿಎಂಸಿ ಅಭ್ಯರ್ಥಿ ಮಮತಾ ಬ್ಯಾನರ್ಜಿ ಅವರಿಗೆ ಯಾವುದೇ ರೀತಿಯ ಹೆಚ್ಚುವರಿ ಅನುಕೂಲ ಪಡೆಯಲು ಅವಕಾಶ ನೀಡುತ್ತಿಲ್ಲ ಎಂದು ಭವಾನಿಪುರ ಮತ್ತು ಪಶ್ಚಿಮ ಬಂಗಾಳ ಜನತೆಗೆ ಖಚಿತಪಡಿಸುತ್ತೇನೆ. ನಿಯಮಗಳ ಉಲ್ಲಂಘನೆಗೂ ಅವರಿಗೆ ಅವಕಾಶ ನೀಡುತ್ತಿಲ್ಲ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಹೊರಗೆ ಮಮತಾ ಅವರು ನಿಂತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಇವಿಎಂ ಮೇಲೆ ನಿಗಾ: ಕೊಲ್ಕತ್ತ ಮತ್ತು ಇತರ ಜಿಲ್ಲೆಗಳ ಸ್ಟ್ರಾಂಗ್ ರೂಮ್‌ಗಳ ಮೇಲೆ ಭದ್ರತಾ ಪಡೆಗಳು ನಿಗಾ ಇಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋಲ್ಕತ್ತದಲ್ಲಿ ಇವಿಎಂ ಇರುವ ಸಖಾವತ್ ಮೆಮೊರಿಯಲ್ ಸರ್ಕಾರಿ ಬಾಲಕಿಯರ ಶಾಲೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ
'ಅಕ್ರಮಕ್ಕೆ ಅವಕಾಶ ಇಲ್ಲ'
'ಮತ ಎಣಿಕೆ ಕೇಂದ್ರಗಳಲ್ಲಿ ಅಕ್ರಮಕ್ಕೆ ಅವಕಾಶವೇ ಇಲ್ಲ' ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ಅವರು ಹೇಳಿದರು. 'ಸ್ಟ್ರಾಂಗ್ ರೂಮ್‌ಗಳಲ್ಲಿ 24 ತಾಸೂ ಸಿ.ಸಿ.ಟಿ.ವಿ ನಿಗಾ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಬಗ್ಗೆ ಮಾಡುತ್ತಿರುವ ಆರೋಪಗಳು ನಿರಾಧಾರ' ಎಂದರು.
15 ಮತಗಟ್ಟೆಗಳಲ್ಲಿ ಮರುಮತದಾನ
ಕೋಲ್ಕತ್ತ: ದಕ್ಷಿಣ 24 ಪರಗಣ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ 15 ಮತಗಟ್ಟೆಗಳಲ್ಲಿ ಮೇ 2ರಂದು ಮರುಮತದಾನ ನಡೆಸಲು ಚುನಾವಣಾ ಆಯೋಗ ಶುಕ್ರವಾರ ಆದೇಶಿಸಿದೆ. ಚುನಾವಣಾ ಅಕ್ರಮ ನಡೆದಿದೆ ಎಂಬ ವರದಿ ಬೆನ್ನಲ್ಲೇ ಆಯೋಗ ಈ ಕ್ರಮ ಕೈಗೊಂಡಿದೆ.
'ಮಗರಹಾಟ್ ಪಶ್ಚಿಮ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮತ್ತು ಡೈಮಂಡ್ ಹಾರ್ಬರ್ ಕ್ಷೇತ್ರದ 4 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ' ಎಂದು ಆಯೋಗ ತಿಳಿಸಿದೆ. ಈ ಮತಗಟ್ಟೆಗಳಲ್ಲಿ ಏಪ್ರಿಲ್ 29ರಂದು ಮತದಾನ ನಡೆದಿತ್ತು.

